ಗುಜರಾತ್ನ ನರ್ಮದೆಯ ಚಿತ್ರಾಡ ಗ್ರಾಮ ಪಂಚಾಯತ್ನಲ್ಲಿ ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾಸುದೇವ್ ವಾಸವ ಅವರ ಪತ್ನಿ ಅಶ್ಮಿತಾ ಬೆನ್ ವಾಸವ ಅವರು ಚುನಾವಣೆಯಲ್ಲಿ ಕೇವಲ 10 ಮತಗಳಿಂದ ಸೋಲನ್ನು ಅನುಭವಿಸಿದ ಬಳಿಕ ಮತ ಎಣಿಕೆ ಕೇಂದ್ರದಲ್ಲಿಯೇ ಕುಸಿದು ಬಿದ್ದ ಘಟನೆಯು ವರದಿಯಾಗಿದೆ.
ಅಶ್ಮಿತಾ ಬೆನ್ ವಾಸವ ಕುಸಿದು ಬೀಳುತ್ತಿದ್ದಂತೆಯೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಜಗಾಡಿಯಾ ತಾಲೂಕಿನ ಜರ್ಸಾದ್ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗ್ರಾಮಪಂಚಾಯತ್ ಸದಸ್ಯ ಅಭ್ಯರ್ಥಿಯು ಸೋತ ಬಳಿಕ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ . ಪರಾಭವಗೊಂಡ ಅಭ್ಯರ್ಥಿ ರಾಜೇಶ್ ವಾಸವ ಎಂಬವರನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಇವರ ಸ್ಥಿತಿಯೂ ಸ್ಥಿರವಾಗಿದೆ ಎಂದು ಜಗಾಡಿಯಾ ಚುನಾವಣಾ ಆಯೋಗದ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ಜಗಾಡಿಯಾದ ಮತ ಎಣಿಕೆ ಕೇಂದ್ರದಲ್ಲಿ ಹಾವೊಂದು ನುಗ್ಗಿದ ಪರಿಣಾಮ ಕೆಲ ಕಾಲ ಗಂಭೀರ ವಾತಾವರಣ ಸೃಷ್ಟಿಯಾಗಿತ್ತು, ಇದರಿಂದ ಬೆಚ್ಚಿಬಿದ್ದ ಅಧಿಕಾರಿಗಳು ಕೂಡಲೇ ಕೊಠಡಿಯನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸುನೀಲ್ ಶರ್ಮ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.