ಕೇರಳದ ವಿದ್ಯಾರ್ಥಿಯೊಬ್ಬ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದಕ್ಕಾಗಿ ತನ್ನನ್ನು ತಾನೇ ಡಿಫರೆಂಟ್ ಆಗಿ ಅಭಿನಂದಿಸಿಕೊಂಡಿದ್ದಾನೆ. ತನ್ನ ಮನೆಯ ಹೊರಗೆ ಫ್ಲೆಕ್ಸ್ ಬೋರ್ಡ್ ಅನ್ನು ಹಾಕಿದ್ದಾನೆ. ಇದು ಆ ರಾಜ್ಯದ ಶಿಕ್ಷಣ ಸಚಿವರಿಗೂ ಮೆಚ್ಚುಗೆಯಾಗಿದೆ.
ಪತ್ತನಂತಿಟ್ಟ ನಿವಾಸಿಯಾಗಿರೋ ವಿದ್ಯಾರ್ಥಿ ಜಿಷ್ಣು 10ನೇ ಕ್ಲಾಸ್‌ನಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು ಎಲ್ಲರೂ ತನ್ನ ಸಾಧನೆಯನ್ನು ಗಮನಿಸಬೇಕು ಅನ್ನೋದು ಜಿಷ್ಣು ಆಸೆಯಾಗಿತ್ತು.
ಹಾಗಾಗಿ ಆತ ಫ್ಲೆಕ್ಸ್ ಮಾಡಿಸಿದ್ದಾನೆ. ‘ಇತಿಹಾಸ ಕೆಲವರಿಗೆ ದಾರಿ ಮಾಡಿಕೊಡುತ್ತದೆ’ ಎಂದು ಫ್ಲೆಕ್ಸ್ ಬೋರ್ಡ್ ಮೇಲೆ ಬರೆದುಕೊಂಡಿದ್ದಾನೆ. SSLC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಕ್ಕಾಗಿ ನನ್ನನ್ನು ನಾನು ಅಭಿನಂದಿಸುತ್ತೇನೆ. ಕಥೆ ಈಗ ಪ್ರಾರಂಭವಾಗುತ್ತದೆ. ಕುಂಜಕ್ಕು ಆವೃತ್ತಿ 3.0.’ ಎಂಬ ಸಂದೇಶವನ್ನು ಫ್ಲೆಕ್ಸ್ ಮೇಲೆ ಬರೆದಿದ್ದಾನೆ. ಜಿಷ್ಣು ಸನ್ ಗ್ಲಾಸ್ ಧರಿಸಿ ಪೋಸ್ ಕೊಟ್ಟಿರೋ ಫೋಟೋ ಕೂಡ ಹಾಕಿದ್ದಾನೆ.
ವಿದ್ಯಾರ್ಥಿ ಹಾಕಿರೋ ಈ ಫ್ಲೆಕ್ಸ್ ಬೋರ್ಡ್ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಕೂಡ ಈ ಪೋಸ್ಟರ್ ನೋಡಿ ದಂಗಾಗಿದ್ದಾರೆ. ಈ ಬಗ್ಗೆ ಫೇಸ್ಬುಕ್ ಪೋಸ್ಟ್ ಕೂಡ ಮಾಡಿದ್ದಾರೆ.
‘ಇತಿಹಾಸ ಕೆಲವರಿಗೆ ದಾರಿ ಮಾಡಿಕೊಡುತ್ತದೆ ಎಂದು ಜಿಷ್ಣು ಖುದ್ದು ಫ್ಲೆಕ್ಸ್‌ನಲ್ಲಿ ಬರೆದಿದ್ದಾನೆ, ಇದು ಸಂಭವಿಸಲಿ ಎಂದು ನಾನು ಬಯಸುತ್ತೇನೆ. ವಿದ್ಯಾರ್ಥಿ ಜೀವನದ ಪರೀಕ್ಷೆಯಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿʼ ಎಂದು ಸಚಿವರು ಹಾರೈಸಿದ್ದಾರೆ.
ಈ ಡಿಫರೆಂಟ್ ಆಗಿರೋ ಪೋಸ್ಟರ್ ಹಾಕಲು ಜಿಷ್ಠುಗೆ ಸ್ನೇಹಿತರು ಸಹಕರಿಸಿದ್ದಾರೆ. ಸದ್ಯ ಮುಂದೇನು ಎಂಬ ಬಗ್ಗೆ ಜಿಷ್ಣು ಗಮನಹರಿಸಿದ್ದು, 11ನೇ ತರಗತಿಯಲ್ಲೂ ಉತ್ತಮ ಅಂಕ ಪಡೆಯುವ ವಿಶ್ವಾಸದಲ್ಲಿದ್ದಾನೆ.