ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರ. ಇದು ಗೊತ್ತಿದ್ದರೂ ಕೋಟ್ಯಾಂತರ ಜನರು ಈ ಚಟಕ್ಕೆ ಬಿದ್ದಿದ್ದಾರೆ. ಈ ಅನಾರೋಗ್ಯಕರ ಪಾನೀಯವನ್ನು ಬೆಟ್ಟಿಂಗ್ ಕಟ್ಟಿ ಕುಡಿಯುವುದು ಇನ್ನೂ ಅಪಾಯಕಾರಿ. ಇದು ಮೂರ್ಖತನದ ಕೆಲಸ ಅಂದರೂ ತಪ್ಪೇನಿಲ್ಲ. ಯುವಕನೊಬ್ಬ ಸ್ನೇಹಿತರೊಂದಿಗೆ ಬೆಟ್ಟಿಂಗ್ ಕಟ್ಟಿಕೊಂಡು ಒಂದೇ ಸಮನೆ ಅತಿಯಾಗಿ ಮದ್ಯ ಸೇವಿಸಿ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿರೋ ಘಟನೆ ಇದು. ಮೂರು ದಿನಗಳ ಹಿಂದೆ ತಾಜ್‌ಗಂಜ್ ಎಂಬಲ್ಲಿ ಈ ಘಟನೆ ಸಂಭವಿಸಿದೆ.
10 ನಿಮಿಷದಲ್ಲಿ 3 ಕ್ವಾರ್ಟರ್ ಮದ್ಯವನ್ನು ಯಾರು ಮೊದಲು ಕುಡಿಯುತ್ತಾರೆ ಎಂದು ಸ್ನೇಹಿತರು ಚಾಲೆಂಜ್ ಮಾಡಿಕೊಂಡಿದ್ದರು. ಎಲ್ಲರೂ ಇದಕ್ಕೆ ಒಪ್ಪಿಕೊಂಡು ಚಾಲೆಂಜ್ ಶುರು ಮಾಡಿದ್ದಾರೆ. ಜೈಸಿಂಗ್, ಕೇಶವ್ ಮತ್ತು ಭೋಲಾ ಈ ಮೂವರು ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. 10 ನಿಮಿಷದಲ್ಲಿ ಮೂರು ಕ್ವಾರ್ಟರ್ ಕುಡಿಯುವವರು ಮದ್ಯಕ್ಕಾಗಿ ಹಣ ಪಾವತಿಸಬೇಕಾಗಿಲ್ಲ ಎಂದು ನಿರ್ಧರಿಸಿಕೊಂಡಿದ್ದಾರೆ. ಇದೇ ರೀತಿ ಮೂವರು ಕುಡಿಯಲು ಶುರು ಮಾಡಿದ್ದಾರೆ.
ಚಾಲೆಂಜ್ ಪೂರ್ತಿಮಾಡುವಷ್ಟರಲ್ಲಿ ಅತಿಯಾದ ಮದ್ಯ ಸೇವನೆಯಿಂದ ಜೈಸಿಂಗ್ ಎಂಬಾತ ಮೃತಪಟ್ಟಿದ್ದಾರೆ. ಆತ ಸತ್ತ ಮೇಲೂ ಸ್ನೇಹಿತರು ಸುಮ್ಮನಾಗಿಲ್ಲ. ಅವನ ಜೇಬಿನಲ್ಲಿದ್ದ 60 ಸಾವಿರ ರೂಪಾಯಿಯನ್ನೂ ಹೊರತೆಗೆದಿದ್ದಾರೆ. ಹಣವನ್ನು ಭೋಲಾ ಹಾಗೂ ಕೇಶವ್ ತಲಾ 30 ಸಾವಿರ ರೂಪಾಯಿ ಹಂಚಿಕೊಂಡಿದ್ದಾರೆ. ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಭೋಲಾ ಮತ್ತು ಕೇಶವ್ ಈ ವಿಚಾರ ಬಾಯ್ಬಿಟ್ಟಿದ್ದಾರೆ. ನಂತರ ಪೊಲೀಸರು ನಿರ್ದಾಕ್ಷಿಣ್ಯ ನರಹತ್ಯೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.