ಪವರ್ ಕಟ್ ಮಾಡುತ್ತೇನೆ, ವಿದ್ಯುತ್ ಕಂಬ ಹತ್ತಿ ಸಮಸ್ಯೆ ಬಗೆಹರಿಸು ಎಂದು ಹೇಳಿದ ಹಿರಿಯ ಅಧಿಕಾರಿಯು ಪವರ್ ಕಟ್ ಮಾಡದ ಕಾರಣ ಕಂಬ ಹತ್ತಿದ ಲೈನ್‌ಮ್ಯಾನ್ ವಿದ್ಯುತ್ ಶಾಖ್‌ನಿಂದ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಬರ್ರಾ ಪ್ರದೇಶದ ನಿವಾಸಿಯಾಗಿರುವ ಲಖನ್ ದ್ವಿವೇದಿ ಅವರು ಮೃತ ಲೈನ್‌ಮ್ಯಾನ್ ಆಗಿದ್ದಾರೆ. ಫೆಬ್ರವರಿ 27ರಂದು ಬರ್ರಾ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು, ಲಖನ್ ದ್ವಿವೇದಿ ಅವರಿಗೆ ಮಾಹಿತಿ ಲಭ್ಯವಾಗಿದೆ. ಅದರಂತೆ, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ನಾನು ಕಂಬ ಹತ್ತಿ ಪರಿಶೀಲಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಹಿರಿಯ ಅಧಿಕಾರಿಗಳೂ ಒಪ್ಪಿದ್ದಾರೆ.
ಹಿರಿಯ ಅಧಿಕಾರಿಗಳು ಪವರ್ ಕಟ್ ಮಾಡಿದ್ದಾರೆ ಎಂದು ಕಂಬ ಹತ್ತಿದ ಲೈನ್‌ಮ್ಯಾನ್‌ಗೆ ವಿದ್ಯುತ್ ತಗುಲಿದ್ದು, ಶಾಕ್‌ನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 2ರಂದು ಮೃತಪಟ್ಟಿದ್ದಾರೆ.
ಲಖನ್ ದ್ವಿವೇದಿ ಮೃತಪಡುವ ಮುನ್ನ ವಿಡಿಯೊ ಹೇಳಿಕೆಯೊಂದನ್ನು ನೀಡಿದ್ದು, ’’ಹಿರಿಯ ಅಧಿಕಾರಿಗಳು ಪವರ್ ಕಟ್ ಮಾಡುತ್ತೇನೆ ಎಂದು ಹೇಳಿದ್ದರಾದರೂ ಕಟ್ ಮಾಡಿಲ್ಲ. ಹಾಗಾಗಿ ನನಗೆ ವಿದ್ಯುತ್ ತಗುಲಿದೆ,’’ ಎಂದು ಹೇಳಿದ್ದಾರೆ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಲಖನ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ದೂರು ದಾಖಲಿಸಿದ್ದಲ್ಲದೆ, ನಿರ್ಲಕ್ಷ್ಯ ವಹಿಸಿದ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಸಹ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.