ಬಹುತೇಕರು ತಮ್ಮ ಮನೆಗಳಲ್ಲಿ ಪ್ರಾಣಿಗಳನ್ನು ಸಾಕಲು ಬಯಸುತ್ತಾರೆ. ನಾಯಿ, ಬೆಕ್ಕು, ಗಿಳಿ ಮೊದಲಾದವು ಈ ಪಟ್ಟಿಯಲ್ಲಿದ್ದು, ಆದರೆ ನಾಯಿಗೆ ಪ್ರಥಮ ಪ್ರಾಶಸ್ತ್ಯವಿರುತ್ತದೆ. ಆದರೆ ಹೀಗೆ ಪ್ರಾಣಿಗಳನ್ನು ಸಾಕುವವರು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ.
ಇದಕ್ಕೆ ಪುಷ್ಟಿ ನೀಡುವಂತೆ ಮನೆಯಲ್ಲಿ ಸಾಕಿದ್ದ ನಾಯಿಯೇ ಕುಟುಂಬ ಸದಸ್ಯರ ಸಾವಿಗೆ ಕಾರಣವಾದ ಕೆಲವೊಂದು ಘಟನೆಗಳು ನಡೆದಿದ್ದು, ಇದಕ್ಕೆ ಈಗ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಹೌದು, ಕುಟುಂಬ ಸದಸ್ಯರು ಸಕಾಲಕ್ಕೆ “ಗಮನ ಕೊಡಲು” ವಿಫಲವಾದ ಕಾರಣಕ್ಕೆ ನಾಯಿ ಕಚ್ಚಿದ ಪರಿಣಾಮ ಒಂದು ತಿಂಗಳ ಮಗು ಸಾವನ್ನಪ್ಪಿದೆ.
ಈ ಘಟನೆಯು ಅಮೆರಿಕಾದ ಕ್ಯಾಲಿಫೋರ್ನಿಯಾದ ಟೊರೆನ್ಸ್‌ನಲ್ಲಿ ನಡೆದಿದೆ. ಮಾರ್ಥಾ ಅವೆನ್ಯೂನಲ್ಲಿರುವ ಮನೆಯಲ್ಲಿ ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಪ್ರಾಣಿ ಕಚ್ಚಿದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕುಟುಂಬದ ನಾಯಿ ಕಚ್ಚಿ ಗಾಯಗೊಂಡಿದ್ದ ಶಿಶುವನ್ನು ಪತ್ತೆ ಮಾಡಿದರು.
ಮಗುವನ್ನು ಉಳಿಸುವ ಪ್ರಯತ್ನದಲ್ಲಿ, ಒಂದು ತಿಂಗಳ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಕುಟುಂಬ ಹಲವು ನಾಯಿಗಳನ್ನು ಸಾಕಿದ್ದು, ಆದರೆ ಚಿಕ್ಕ ಮಗುವಿದ್ದರೂ ಅದರ ಸುರಕ್ಷತೆಗೆ ಹೆಚ್ಚಿನ ಗಮನ ಇರಿಸಿರಲಿಲ್ಲ. ಹೀಗಾಗಿ 1 ತಿಂಗಳ ಮಗುವನ್ನು ಗಾಯಗೊಳಿಸಿದ ನಾಯಿ ಅದರ ಸಾವಿಗೆ ಕಾರಣವಾಗಿದೆ. ಇದೀಗ ಪೊಲೀಸರು ಪೋಷಕರ ನಿರ್ಲಕ್ಷ್ಯತನದ ಕುರಿತು ತನಿಖೆ ನಡೆಸುತ್ತಿದ್ದಾರೆ.