ಕೊರೊನಾ ಸಂಕಷ್ಟವೇ ಇನ್ನೂ ವಾಸಿಯಾಗಿಲ್ಲ. ಅಂತದ್ರಲ್ಲಿ ಆಂಧ್ರ ಪ್ರದೇಶದ ಏಲೂರು ನಗರದ 350ಕ್ಕೂ ಹೆಚ್ಚು ನಿವಾಸಿಗಳು ವಿಚಿತ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಭಾನುವಾರ ರಾತ್ರಿಯಿಂದ ಈವರೆಗೆ 76 ಮಂದಿಯನ್ನ ಆಸ್ಪತ್ರೆಗೆ ರವಾನಿಸಲಾಗಿದ್ದು, ರೋಗಿಗಳ ಸಂಖ್ಯೆ 350ಕ್ಕಿಂತ ಹೆಚ್ಚಾಗಿದೆ ಎಂದು ಅಂದಾಜಿಸಲಾಗಿದೆ.
ಇಲ್ಲಿಯವರೆಗೆ 186 ಮಂದಿಯನ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 157 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಅಂತಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಕರಿಗೆ ಹಾಗೂ ಅಪಸ್ಮಾರದ ಲಕ್ಷಣಗಳೊಂದಿಗೆ ಏಲೂರಿನ ಜಿಜಿಹೆಚ್ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಸಿಎಂ ವೈ,ಎಸ್. ಜಗನ್ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಅನಾರೋಗ್ಯ ಪೀಡಿತರ ಆರೋಗ್ಯ ವಿಚಾರಿಸಿದ್ದಾರೆ. ಏಲೂರಿನಾದ್ಯಂತ ಮಹಾನಗರ ಪಾಲಿಕೆ ನಿಯಂತ್ರಣ ಕೊಠಡಿ ಸ್ಥಾಪನೆ ಮಾಡಿದೆ. ಅನಾರೋಗ್ಯದ ಮೂಲವನ್ನ ಹುಡುಕಲು ಹೈದರಾಬಾದ್ನಿಂದ ವೈದ್ಯರ ತಂಡ ಏಲೂರಿಗೆ ಧಾವಿಸಿದ್ದು, ಪರಿಶೀಲನೆ ಮುಂದುವರಿಸಿದೆ.