![](https://kannadadunia.com/wp-content/uploads/2022/01/ree-1641710118-1024x768.jpg)
ಕುತೂಹಲಕಾರಿ ವಿಷಯವೆಂದರೆ, ರೈ ಫ್ಯಾಮಿಲಿ ಸುಮಾರು ಒಂದು ಕೋಟಿ ನಗದನ್ನ, ಬ್ಯಾಗ್ ನೊಳಗೆ ತುಂಬಿ ನೀರಿನ ಟ್ಯಾಂಕ್ ನಲ್ಲಿ ಅಡಗಿಸಿಟ್ಟಿದ್ದರು. ಟ್ಯಾಂಕ್ ನಿಂದ ಹಣ ತೆಗೆದ ಅಧಿಕಾರಿಗಳು, ನೀರಿನಲ್ಲಿ ನೆಂದಿದ್ದ ನೋಟುಗಳನ್ನ ಐರನ್ ಹಾಗೂ ಹೇರ್ ಡ್ರೈಯರ್ ಸಹಾಯದಿಂದ ಒಣಗಿಸುತ್ತಿರುವ ವಿಡಿಯೋ ಸದ್ಯ ಆನ್ಲೈನ್ ನಲ್ಲಿ ವೈರಲ್ ಆಗುತ್ತಿದೆ.
ಆದಾಯ ತೆರಿಗೆ ಇಲಾಖೆಯು ರೈ ಕುಟುಂಬದಿಂದ 8 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ, ಅದರಲ್ಲಿ ನೀರಿನ ಟ್ಯಾಂಕ್ ನಲ್ಲಿ ಬಚ್ಚಿಟ್ಟಿದ್ದ 1 ಕೋಟಿ ರೂಪಾಯಿ ನಗದು ಸೇರಿದೆ. ಅಲ್ಲದೆ, ಮೂರು ಕಿಲೋಗ್ರಾಂಗಳಷ್ಟು ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ದಾಳಿಯ ನೇತೃತ್ವ ವಹಿಸಿದ್ದ ಜಬಲ್ಪುರದ ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಮುನ್ಮುನ್ ಶರ್ಮಾ ಹೇಳಿದ್ದಾರೆ.
ಭೌತಿಕ ದಾಳಿ ಮುಗಿದಿದೆ, ಈಗ ರೈ ಕುಟುಂಬದಿಂದ ವಶಪಡಿಸಿಕೊಂಡಿರುವ ದಾಖಲೆಗಳ ಆಧಾರದ ಮೇಲೆ ತನಿಖೆ ಮುಂದುವರಿಯುತ್ತದೆ ಎಂದು ಮುನ್ಮುಮ್ ಶರ್ಮಾ ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಗ್ಗೆ 6 ಗಂಟೆಗೆ ಆರಂಭವಾದ ಐಟಿ ದಾಳಿ ಸತತ 39 ಗಂಟೆಗಳ ಕಾಲ ನಡೆಯಿತು. ಶಂಕರ್ ರೈ ಕುಟುಂಬಕ್ಕೆ ಸೇರಿದ ಹತ್ತಕ್ಕೂ ಹೆಚ್ಚು ಸ್ಥಳಗಳ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯಮಿ ಶಂಕರ್ ರೈ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಪುರಸಭೆ ಅಧ್ಯಕ್ಷರಾಗಿದ್ದರೆ, ಅವರ ಸಹೋದರ ಕಮಲ್ ರೈ ಬಿಜೆಪಿ ಮುಖಂಡರಾಗಿದ್ದು, ಪುರಸಭೆಯ ಉಪಾಧ್ಯಕ್ಷರಾಗಿದ್ದರು.