ರೂಬಿಕ್ಸ್ ಕ್ಯೂಬ್ ಅನ್ನು ಸಾಲ್ವ್ ಮಾಡುವುದು ಎಲ್ಲರಿಗೂ ಅಷ್ಟು ಸಲೀಸಲ್ಲದ ಕೆಲಸ. ಟೈಮ್ ಪಾಸ್ ಗಾಗಿ, ಏಕಾಗ್ರತೆಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಗರಗರನೆ ರೂಬಿಕ್ ತಿರುಗಿಸುವ ಅಭ್ಯಾಸ ಉಂಟು. ವರ್ಷಗಳು ಕಳೆದರೂ ಅನೇಕರಿಗೆ ರೂಬಿಕ್ ಕುತೂಹಲ ಬಗೆಹರಿದಿಲ್ಲ.
ಇಲ್ಲೊಬ್ಬ ವ್ಯಕ್ತಿ 1.26 ಸೆಕೆಂಡುಗಳಲ್ಲಿ ರೂಬಿಕ್ಸ್ ಕ್ಯೂಬ್ ಅನ್ನು ಸಾಲ್ವ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಹೈಡ್ ಎಂಬಾತ ಪೋಸ್ಟ್ ಮಾಡಿದ ವಿಡಿಯೊವನ್ನು “ರೂಬಿಕ್ಸ್ ಕ್ಯೂಬ್ ವರ್ಲ್ಡ್ ರೆಕಾರ್ಡ್ – 1.26 ಸೆಕೆಂಡುಗಳು” ಎಂದು ಹೆಸರಿಸಲಾಗಿದೆ.
ಕ್ಲಿಪ್‌ನಲ್ಲಿ ಹೈಡ್ ಕುರ್ಚಿಯ ಮೇಲೆ ಕುಳಿತಿರುವುದನ್ನು ನೋಡಬಹುದು ಮತ್ತು ರೂಬಿಕ್ಸ್ ಅನ್ನು ಅವನ ಮುಂದೆ ಪೆಟ್ಟಿಗೆಯಲ್ಲಿ ಮರೆಮಾಡಲಾಗಿದೆ. ಒಬ್ಬ ವ್ಯಕ್ತಿಯು ಪೆಟ್ಟಿಗೆಯನ್ನು ತೆಗೆದುಹಾಕುತ್ತಾನೆ, ಅದರ ನಂತರ ಹೈಡ್ ರೂಬಿಕ್ ಪರಿಶೀಲಿಸುತ್ತಾನೆ. ನಂತರ ಅವನು ರೂಬಿಕ್ಸ್ ಕ್ಯೂಬ್ ಅನ್ನು ಎತ್ತಿಕೊಂಡು ಕಣ್ಣು ಮಿಟುಕಿಸುವ ಮುಂಚೆಯೇ ಅದನ್ನು ಪರಿಹರಿಸಿದಂತೆ ಕಾಣಿಸುತ್ತದೆ.
ಅಲ್ಲಿದ್ದ ಟೈಮರ್ ಪ್ರಕಾರ ರೂಬಿಕ್ಸ್ ಕ್ಯೂಬ್ ಅನ್ನು 1.26 ಸೆಕೆಂಡುಗಳಲ್ಲಿ ಪರಿಹರಿಸಲಾಗಿದೆ. ಈ ವಿಡಿಯೋ ನೆಟ್ಟಿಗರನ್ನು ತಬ್ಬಿಬ್ಬುಗೊಳಿಸಿದ್ದು, ಕ್ಯೂಬ್ ಸರಿಯಾಗಿ ಷಫಲ್ ಆಗಿಲ್ಲ ಎಂದು ಹಲವರು ಹೇಳಿದ್ದಾರೆ. ಹೈಡ್ ನಂತರ ಮತ್ತೊಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ದಾಖಲೆ ಅಸಲಿಯಲ್ಲ ನಕಲಿ ಎಂಬ ಸಂಗತಿಯನ್ನು ಹಂಚಿಕೊಂಡಿದ್ದಾರೆ.