ಕೊರೊನಾ 2ನೇ ಅಲೆಯಲ್ಲಿ ಮಕ್ಕಳು ಹಾಗೂ ಕಿರಿಯ ವಯಸ್ಸಿನವರ ಮೇಲೆಯೇ ಹೆಚ್ಚು ಪರಿಣಾಮ ಬೀರಿದೆ ಎಂಬ ಹೇಳಿಕೆಗಳನ್ನ ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಕೊರೊನಾ ಎರಡೂ ಅಲೆಗಳು 1 ರಿಂದ 20 ವರ್ಷದವರಿಗೆ 12 ಪ್ರತಿಶತಕ್ಕೂ ಕಡಿಮೆ ಪರಿಣಾಮ ಬೀರಿದೆ ಎಂಬ ಮಾಹಿತಿಯನ್ನ ನೀಡಿದೆ.
ಕೊರೊನಾ ಎರಡನೇ ಅಲೆಯಲ್ಲಿ (ಮಾರ್ಚ್ 15 – ಮೇ 25) ಒಟ್ಟು ಕೇಸ್ನಲ್ಲಿ 11.62 ಪ್ರತಿಶತ ಪ್ರಕರಣ ಮಾತ್ರ 1 ರಿಂದ 20 ವರ್ಷದವರದ್ದಾಗಿದೆ. ಇನ್ನು ಕೊರೊನಾ ಮೊದಲ ಅಲೆಯಲ್ಲಿ (ಜುಲೈ 1 – ಡಿಸೆಂಬರ್ 31) 11.31 ಪ್ರತಿಶತ ಪ್ರಕರಣಗಳು 1 ರಿಂದ 20 ವರ್ಷ ವಯಸ್ಸಿನವರದ್ದಾಗಿದೆ. ಹೀಗಾಗಿ ಕೊರೊನಾ ಮೊದಲ ಹಾಗೂ ಎರಡನೆಯಲ್ಲಿ ಈ ವಯಸ್ಸಿನವರಲ್ಲಿ ಸರಿ ಸುಮಾರು ಒಂದೇ ಮಾದರಿಯ ಪರಿಣಾಮ ಬೀರಿದೆ ಎಂದು ಹೇಳಿದೆ.
ಈ ದತ್ತಾಂಶಗಳ ಪ್ರಕಾರ ಕೊರೊನಾದ ಎರಡೂ ಅಲೆಗಳಲ್ಲಿ 21 ರಿಂದ 51 ವರ್ಷ ಪ್ರಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಕೊರೊನಾ ಎರಡನೆ ಅಲೆಯಲ್ಲಿ 59.74 ಪ್ರತಿಶತ ಹಾಗೂ ಮೊದಲ ಅಲೆಯಲ್ಲಿ 62.45 ಪ್ರತಿಶತದಷ್ಟು ಪ್ರಕರಣಗಳು 21 ರಿಂದ 51 ವರ್ಷದೊಳಗಿನವರಲ್ಲೇ ವರದಿಯಾಗಿದೆ.
ಇನ್ನು ಕೊರೊನಾ ಮೊದಲ ಅಲೆಯಲ್ಲಿ 13.89 ಪ್ರತಿಶತ ಹಾಗೂ ಎರಡನೆ ಅಲೆಯಲ್ಲಿ 12.58 ಪ್ರತಿಶತ 61 ವರ್ಷ ಮೇಲ್ಪಟ್ಟವರ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ದೇಶದಲ್ಲಿರುವ ಒಟ್ಟು 1 ರಿಂದ 10 ವರ್ಷ ಪ್ರಾಯದವರಲ್ಲಿ 3.28 ಪ್ರತಿಶತ ಮೊದಲ ಅಲೆ ಹಾಗೂ 3.05 ಪ್ರತಿಶತ ಮಂದಿ ಮಕ್ಕಳು ಎರಡನೆ ಅಲೆಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ ಎಂದೂ ತಿಳಿದುಬಂದಿದೆ.
ದೇಶದಲ್ಲಿ ಕೊರೊನಾ ಸ್ಥಿತಿ ಸುಧಾರಿಸುತ್ತಿರೋದರ ಬಗ್ಗೆಯೂ ಮಾಹಿತಿ ನೀಡಿರುವ ಅಗರ್ವಾಲ್, ಮೇ 7ರಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾದ ಕೊರೊನಾ ದೈನಂದಿನ ಪ್ರಕರಣಕ್ಕೆ ಹೋಲಿಸಿದ್ರೆ ಈಗ ದೇಶದಲ್ಲಿ 85 ಪ್ರತಿಶತದಷ್ಟು ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದು ಹೇಳಿದ್ದಾರೆ.