ಲಕ್ನೋದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ & ಟೆಕ್ನಾಲಜಿಯ ವಿದ್ಯಾರ್ಥಿಯೊಬ್ಬರು ಸಂಸ್ಥೆಯೊಂದರ ಅತ್ಯಧಿಕ ವಾರ್ಷಿಕ ವೇತನ ಪ್ಯಾಕೇಜ್ ಆದ 1.2 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐರ್ಲೆಂಡ್ನ ಡಬ್ಲಿನ್ನಲ್ಲಿ ಅಮೆಜಾನ್ನ ಸಾಫ್ಟ್ವೇರ್ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ಅಭಿಜಿತ್ ದ್ವಿವೇದಿ ನೇಮಕಗೊಂಡಿದ್ದಾರೆ.
ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಬಿ.ಟೆಕ್ನ ಅಂತಿಮ ವರ್ಷದಲ್ಲಿರುವ ಅಭಿಜಿತ್, ದಿಗ್ಭ್ರಮೆಗೊಳಿಸುವ ವಾರ್ಷಿಕ ಪ್ಯಾಕೇಜ್ನೊಂದಿಗೆ ಹಿಂದಿನ ಎಲ್ಲಾ ಪ್ಲೇಸ್ಮೆಂಟ್ ದಾಖಲೆಗಳನ್ನು ಮುರಿದಿದ್ದಾರೆ.
ನಾನು ಸಾಕಷ್ಟು ವಿಡಿಯೋಗಳನ್ನು ವೀಕ್ಷಿಸಿ ಸಂದರ್ಶನಕ್ಕೆ ನಾನೇ ತಯಾರಾಗಿದ್ದೆ. ಸಾಫ್ಟ್ ಸ್ಕಿಲ್ ತುಂಬಾನೇ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಹೀಗಾಗಿ ಇಂಜಿನಿಯರ್ ಪದವೀಧರರು ಕೇವಲ ಟೆಕ್ನಿಕಲ್ ಜ್ಞಾನದ ಬಗ್ಗೆ ಮಾತ್ರ ತಿಳಿದಿದ್ದರೆ ಸಾಲದು. ನಿಮ್ಮ ಸಂವಹನ ಕೌಶಲ್ಯ ಹಾಗೂ ಹಾವಭಾವ ಕೂಡ ಮುಖ್ಯವಾಗುತ್ತದೆ ಎಂದು ಅಭಿಜಿತ್ ಹೇಳಿದ್ದಾರೆ.
ಉದ್ಯೋಗವನ್ನು ಅರಸುತ್ತಿರುವ ಇತರೆ ಪದವೀಧರರಿಗೆ ಅಭಿಜಿತ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಉತ್ತಮ ಕೆಲಸವನ್ನು ಪಡೆದುಕೊಳ್ಳಲು ಕೆಲವೊಂದು ವಿಷಯಗಳ ಮೇಲೆ ಕೆಲಸ ಮಾಡಬೇಕು.ಉದ್ಯೋಗಾವಕಾಶಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಸಂದರ್ಶನಗಳನ್ನು ಎದುರಿಸಲು ನಿಮ್ಮ ಸೀನಿಯರ್ಗಳ ಜೊತೆ ಸಂಪರ್ಕದಲ್ಲಿರಿ. ಅಲ್ಲದೇ ನಿಯಮಿತವಾಗಿ ನವೀಕರಣಗೊಳ್ಳಬಲ್ಲ ಜನಪ್ರಿಯ ಉದ್ಯೋಗ ಪೋರ್ಟಲ್ಗಳಲ್ಲಿ ನಿಮ್ಮ ಪ್ರೊಫೈಲ್ಗಳನ್ನು ರಚಿಸಿ ಎಂದು ಹೇಳಿದ್ದಾರೆ.