ತಮಿಳುನಾಡಿನ ಸೇಲಂನಲ್ಲಿ ಯುವಕನೊಬ್ಬ ತನ್ನ ಕನಸಿನ ಬೈಕ್ ಅನ್ನು 1 ರೂಪಾಯಿ ನಾಣ್ಯದ ರೂಪದಲ್ಲಿ 2.6 ಲಕ್ಷ ರೂಪಾಯಿ ಪಾವತಿಸಿ ಖರೀದಿಸಿದ್ದಾನೆ.
ವಿ. ಭೂಪತಿ ಕಳೆದ ಮೂರು ವರ್ಷಗಳಿಂದ 1 ರೂಪಾಯಿ ನಾಣ್ಯಗಳನ್ನು ಉಳಿತಾಯ ಮಾಡಿದ್ದರು. ತಮ್ಮ ಉಳಿತಾಯ ಹಣದಿಂದ ಸಂಗ್ರಹಿಸಿದ ಮೊತ್ತವನ್ನು ಶೋರೂಂ ಗೆ ತೆಗೆದುಕೊಂಡು ಹೋಗಿ ಹೊಸ ಬಜಾಜ್ ಡೋಮಿನಾರ್ ಖರೀದಿ ಮಾಡಿದ್ದಾರೆ.
ಶೋರೂಂನ ಸಿಬ್ಬಂದಿ ಭೂಪತಿ ಸಂಗ್ರಹಿಸಿದ್ದ 1 ರೂಪಾಯಿ ನಾಣ್ಯಗಳನ್ನು ಎಣಿಸಲು ಬರೋಬ್ಬರಿ 10 ಗಂಟೆಗಳ ಸಮಯಾವಕಾಶ ತೆಗೆದುಕೊಂಡಿದ್ದಾರೆ ಎಂದು ಭಾರತ್ ಏಜೆನ್ಸಿಯ ಮ್ಯಾನೇಜರ್ ಮಹಾವಿಕ್ರಾಂತ್ ಹೇಳಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಭೂಪತಿ ಅವರಿಗೆ ಅವರ ಕನಸಿನ ಬೈಕ್ ಸಿಕ್ಕಿದೆ.
ಈ ನಾಣ್ಯಗಳನ್ನು ಅವರು ಹೋಟೆಲ್, ಟೀ ಅಂಗಡಿ ಮೊದಲಾದೆಡೆ ನೀಡಿದ ವೇಳೆ ಸಂಗ್ರಹಿಸಿಟ್ಟುಕೊಂಡಿದ್ದರು. ಕಾಯಿನ್ ಮೂಲಕ ಬೈಕ್ ಖರೀದಿಸುವುದಾಗಿ ಭೂಪತಿ ಹೇಳಿದಾಗ ಮ್ಯಾನೇಜರ್ ಮಹಾವಿಕ್ರಾಂತ್ ಅವರಿಗೆ ಒಂದು ಕ್ಷಣ ಅಚ್ಚರಿಯಾಯಿತಂತೆ. ಆದರೆ ಭೂಪತಿ ಉತ್ಸಾಹಕ್ಕೆ ಭಂಗ ತರಲಿಚ್ಚಿಸದ ಅವರು ಕಾಯಿನ್ ಮೂಲಕ ಹಣ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ.
ಭೂಪತಿ ಬಿಸಿಎ ಪದವಿಧರನಾಗಿದ್ದು ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಈತ ಕಳೆದ ನಾಲ್ಕು ವರ್ಷಗಳಿಂದ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಬೈಕ್ ಖರೀದಿಸುವ ಕನಸು ಕಂಡಿದ್ದ ಇವರಿಗೆ ಆಗ 2 ಲಕ್ಷ ರೂಪಾಯಿ ಬೆಲೆ ಇದ್ದ ಬೈಕ್ ಖರೀದಿಸಲು ಹಣವಿರಲಿಲ್ಲ.