ಹೈದರಾಬಾದ್: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಹೋರಾಟ, ಪ್ರತಿಭಟನೆಯಲ್ಲಿ ಮೃತಪಟ್ಟ 750 ಮಂದಿ ರೈತರ ಕುಟುಂಬಗಳಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡಲು ತೆಲಂಗಾಣ ಸರ್ಕಾರ ಮುಂದಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೃಷಿ ಕಾಯ್ದೆ ವಿರೋಧಿಸಿ ನಡೆದ ಒಂದು ವರ್ಷದ ರೈತರ ಪ್ರತಿಭಟನೆಯಲ್ಲಿ ಮೃತಪಟ್ಟವರಿಗೆ ತಲಾ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಇದದಿಂದ ಸರ್ಕಾರದ ಬೊಕ್ಕಸಕ್ಕೆ 22.5 ಕೋಟಿ ರೂ. ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ತೆಲಂಗಾಣ ಸರ್ಕಾರ 3 ಲಕ್ಷ ರೂ. ಪರಿಹಾರ ಘೋಷಿಸಿದ್ದು, ಕೇಂದ್ರ ಸರ್ಕಾರ ಮೃತಪಟ್ಟ ರೈತ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.