ನಕಲಿ ಆಡಿಯೋ ಕ್ಲಿಪ್ ಒಂದನ್ನು ಬಳಸಿಕೊಂಡು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಹೆಸರಿನಲ್ಲಿ ಮಾಡುವ ಒಂದೊಂದು ಟ್ವೀಟ್‌ಗೂ 2 ರೂಪಾಯಿ ಸಿಗುತ್ತದೆ ಎಂದು ಸುಳ್ಳು ಹಬ್ಬಿಸಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ.
ಈ ಸಂಬಂಧ ನಕಲಿ ಆಡಿಯೋ ಕ್ಲಿಪ್ ಸೃಷ್ಟಿಸಿದ ಆಪಾದನೆ ಮೇಲೆ ಉ.ಪ್ರ. ಬಿಜೆಪಿ ನಾಯಕಿಯೊಬ್ಬರ ಪತಿಯನ್ನು ಬಂಧಿಸಲಾಗಿದೆ.
“ನನ್ನ ಪತಿ ಆಶಿಶ್ ಪಾಂಡೆ ಕಳೆದ ನಾಲ್ಕು ವರ್ಷಗಳಿಂದ ಯೋಗಿ ಆದಿತ್ಯನಾಥರ ಹೆಸರನ್ನು ಆರಾಧಿಸುತ್ತಾ ಬಂದಿದ್ದಾರೆ. ಇದು ಅವರ ಗೌರವ, ಭಕ್ತಿ ಹಾಗೂ ಶ್ರದ್ಧೆಯ ಪರೀಕ್ಷೆಯಾಗಿರಬಹುದು. ಯೋಗಿ ಆದಿತ್ಯನಾಥರ ಭೇಟಿಗೆ ಅವಕಾಶ ನೀಡುವಂತೆ ಕೋರುತ್ತೇನೆ, ಆಗ ನಾನು ನನ್ನ ಕಥೆಯನ್ನು ವಿವರಿಸಬಹುದಾಗಿದೆ” ಎಂದು ರಾಜ್ಯ ಬಿಜೆಪಿಯ ಎನ್‌ಜಿಓ ಘಟಕದ ಆಯೋಜಕಿಯಾಗಿರುವ ಡಾ. ಪ್ರೀತಿ ತಿಳಿಸಿದ್ದಾರೆ.
ಘಟನೆ ಸಂಬಂಧ ಪಾಂಡೆ, ಹಾಗೂ ಅವರ ಸಹವರ್ತಿ ಹಿಮಾಂಶು ಸೈನಿರನ್ನು ಕಾನ್ಪುರ ಪೊಲೀಸರು ಬಂಧಿಸಿ, ಅವರ ವಿರುದ್ಧ ವಂಚನೆ, ನಕಲು ಸೃಷ್ಟಿ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮ್ಯಾನೇಜ್ಮೆಂಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಪಾಂಡೆ, ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಕಾರ್ಯಾಲಯದ ಸಾಮಾಜಿಕ ಜಾಲತಾಣದ ಖಾತೆಗಳನ್ನು ನಿರ್ವಹಿಸುವ ಹೊಣೆಗಾರಿಕೆ ನಿಭಾಯಿಸುತ್ತಿದ್ದರು.
1 ನಿಮಿಷ 10 ಸೆಕೆಂಡ್‌ಗಳಷ್ಟಿರುವ ಈ ಆಡಿಯೋ ಕ್ಲಿಪ್‌ನಲ್ಲಿ ಇಬ್ಬರು ಅನಾಮಿಕ ವ್ಯಕ್ತಿಗಳ ದನಿ ಕೇಳುತ್ತಿದ್ದು, ನಿರ್ದಿಷ್ಟ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮುಖ್ಯಮಂತ್ರಿಯ ಪರವಾಗಿ ಟ್ವೀಟ್ ಮಾಡಿದಲ್ಲಿ 2ರೂ./ಟ್ವೀಟ್‌ನಂತೆ ಪೇಮೆಂಟ್ ಸಿಗಲಿದೆ ಎಂದು ಹೇಳಿದ್ದಾರೆ.
ಈ ಕ್ಲಿಪ್ ಅನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ಶೇರ್ ಮಾಡಿಕೊಂಡಿದ್ದಾರೆ. ಯೋಗಿ ಅವರ ಕಟ್ಟಾ ವಿರೋಧಿಯಾದ ಸಿಂಗ್ ವಿರುದ್ಧ ಸುಳ್ಳು ಪೋಸ್ಟ್‌ಗಳನ್ನು ಮಾಡಿದ ಆಪಾದನೆ ಮೇಲೆ ಅನೇಕ ಕೇಸುಗಳನ್ನು ಅದಾಗಲೇ ದಾಖಲಿಸಲಾಗಿದೆ.
ಮೇಲ್ಕಂಡ ಆಡಿಯೋ ಕ್ಲಿಪ್‌ನಲ್ಲಿ ಎರಡು ಪ್ರತ್ಯೇಕ ದನಿಗಳನ್ನು ಕೂಡಿಸಲಾಗಿದ್ದು, ಅದರಲ್ಲಿ ಒಬ್ಬಾತ ಮೈನರ್ ಎಂದಿರುವ ಪೊಲೀಸರು, ಈ ಸಂಬಂಧ ಲ್ಯಾಪ್ಟಾಪ್ ಹಾಗೂ ಮೊಬೈಲ್ ಡಿವೈಸ್‌ಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.