ವರ್ಕ್ ಫ್ರಂ ಹೋಮ್, ಅಥವಾ ಮನೆಯಲ್ಲಿಯೇ ಇನ್ಯಾವುದೋ ಕೆಲಸ ಮಾಡಿಕೊಂಡು ಮಕ್ಕಳನ್ನು ನಿಭಾಯಿಸುವುದು ಎಂದರೆ ದೊಡ್ಡ ಸವಾಲೇ ಸರಿ. ಮಕ್ಕಳು ಈಗ ಇದ್ದ ಹಾಗೇ ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ನೀವು ಎಷ್ಟೇ ಅವರನ್ನು ಪುಸಲಾಯಿಸಿದರೂ ಅವರು ಮತ್ತೆ ಅದೇ ತುಂಟತನ ಮಾಡುತ್ತಿರುತ್ತಾರೆ.
ಕೆಲವು ಮಕ್ಕಳು ಯಾವುದೇ ತೊಂದರೆ ಮಾಡದೇ ತಮ್ಮಷ್ಟಕ್ಕೆ ತಾವೇ ಆಡುತ್ತಿರುತ್ತಾರೆ. ಆದರೆ ಇನ್ನು ಕೆಲವು ಮಕ್ಕಳು ಮಾತ್ರ ತಾಯಂದಿರ ಕಣ್ಣು ತಪ್ಪಿಸಿ ಏನಾದರು ಒಂದು ಕಿತಾಪತಿ ಮಾಡುತ್ತಿರುತ್ತಾರೆ. ಇಂತಹ ಮಕ್ಕಳನ್ನು ಸುಲಭದಲ್ಲಿ ಸಂಬಾಳಿಸುವುದಕ್ಕೆ ಆಗುವುದಿಲ್ಲ!
ನಿಮ್ಮ ಕೆಲಸ, ಒತ್ತಡಗಳನ್ನು ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ಹೇರಬೇಡಿ. ಆದಷ್ಟು ಮನೆಕೆಲಸಗಳನ್ನು ಮಕ್ಕಳು ಏಳುವ ಮೊದಲೇ ಮಾಡಿಕೊಂಡು ಬಿಡಿ. ಅಡುಗೆ, ತಿಂಡಿ ಇವಿಷ್ಟನ್ನು ಬೇಗನೆ ಮುಗಿಸಿಕೊಂಡು ಬಿಟ್ಟರೆ ಅರ್ಧ ಕೆಲಸ ಮುಗಿದಂತೆ ಆಗುತ್ತದೆ.
ಇನ್ನು ಆಫೀಸ್ ಕೆಲಸವನ್ನು ಮನೆಯಲ್ಲಿಯೇ ಮಾಡುತ್ತಿದ್ದರೆ ಆ ಸಮಯದಲ್ಲಿ ಮಕ್ಕಳಿಗೆ ಡ್ರಾಯಿಂಗ್ ಮಾಡುವುದು, ಇಲ್ಲವೇ ಬ್ಲಾಕ್ಸ್ ಇನ್ನಿತರ ಆಟದ ಸಾಮಾನುಗಳನ್ನು ಕೊಡಿ. ಅವರು ಆದಷ್ಟು ಅದರಲ್ಲಿ ಎಂಗೇಜ್ ಆದರೆ ನಿಮ್ಮ ಕೆಲಸಕ್ಕೆ ಸಮಯ ಸಿಗುತ್ತದೆ.
ಇನ್ನು ಮಧ್ಯಾಹ್ನದ ನಿದ್ರೆ ಮಾಡುವ ಅಭ್ಯಾಸವನ್ನು ಅವರಿಗೆ ಮಾಡಿಸಿ. ಆಗ ನಿಮಗೂ ಸ್ವಲ್ಪ ಸಮಯ ಸಿಕ್ಕಿದ ಹಾಗೇ ಆಗುತ್ತದೆ.
ನಿಮ್ಮ ಕೆಲಸದ ನಡುವೆ ಆಗಾಗ ಅವರನ್ನು ಆಡಿಸುತ್ತಾ, ಅವರಿಗೆ ಏನಾದರೂ ಆಸಕ್ತಿದಾಯಕ ವಿಷಯಗಳನ್ನು ಹೇಳಿಕೊಡುತ್ತಾ ಇರಿ. ಇದರಿಂದ ಅವರಿಗೂ ಬೇಸರವಾಗುವುದಿಲ್ಲ.