ಜಾಮ್ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಮಕ್ಕಳಂತೂ ಹಾಗೆಯೇ ತಿಂದು ಬಿಡುತ್ತಾರೆ. ಮನೆಯಲ್ಲಿ ಸುಲಭವಾಗಿ ಸೇಬು ಹಣ್ಣಿನ ಜಾಮ್ ಮಾಡುವ ವಿಧಾನ ಇದೆ. ಮಕ್ಕಳಿಗೆ ಮಾಡಿಕೊಡಿ.
ಬೇಕಾಗುವ ಸಾಮಗ್ರಿಗಳು:
1 ಕೆಜಿ ಸೇಬುಹಣ್ಣು (ಕತ್ತರಿಸಿದ್ದು), 1 ಕೆಜಿ ಸಕ್ಕರೆ, ¼ ಕಪ್ ಲಿಂಬೆಹಣ್ಣಿನ ರಸ, ¼ ಟೀ ಸ್ಪೂನ್ – ಚಕ್ಕೆ ಪುಡಿ.
ಮಾಡುವ ವಿಧಾನ:
ಕತ್ತರಿಸಿದ ಸೇಬು ಹಣ್ಣನ್ನು ಒಂದು ಸ್ಟೀಲ್ ಅಥವಾ ಗಾಜಿನ ಡಬ್ಬಕ್ಕೆ ಹಾಕಿ ಅದಕ್ಕೆ ನೀರು ಸೇರಿಸಿ ರಾತ್ರಿಯಿಡೀ ಹಾಗೇ ಮುಚ್ಚಿಡಿ. ಬೆಳಿಗ್ಗೆ ಇದನ್ನು ದಪ್ಪ ತಳದ ಪಾತ್ರೆಗೆ ಹಾಕಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ, ನಂತರ ಮಿಕ್ಸಿ ಜಾರಿಗೆ ಹಾಕಿ ಸೋಸಿಕೊಳ್ಳಿ.
ಸೋಸಿಕೊಂಡ ಮಿಶ್ರಣವನ್ನು ಒಂದು ಪ್ಯಾನ್ ಗೆ ಹಾಕಿಕೊಂಡು ಗ್ಯಾಸ್ ಮೇಲೆ ಇಟ್ಟು ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ, ಲಿಂಬೆಹಣ್ಣಿನ ರಸ, ಚಕ್ಕೆ ಪುಡಿ ಹಾಕಿ ಮಿಕ್ಸ್ ಮಾಡಿ.
ಸಕ್ಕರೆ ಕರಗುವವರಗೆ ಸಣ್ಣ ಉರಿಯಲ್ಲಿ ಬಿಡದೇ ಕೈಯಾಡಿಸುತ್ತಲೇ ಇರಿ. ನಂತರ ಬಣ್ಣ ಬದಲಾಗುವವರೆಗೆ ಚೆನ್ನಾಗಿ ಕುದಿಸಿಕೊಳ್ಳಿ. ದಪ್ಪ ಮಿಶ್ರಣವಾದ ಕೂಡಲೇ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಫ್ರಿಡ್ಜ್ ನಲ್ಲಿಡಿ.