ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕಳಿಸಿದ್ದ ವಾಟ್ಸಾಪ್ ಸಂದೇಶದಲ್ಲಿ ತಮ್ಮ ಸಾವಿಗೆ ಸಚಿವ ಈಶ್ವರಪ್ಪನವರೇ ನೇರ ಕಾರಣವೆಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಸಚಿವ ಈಶ್ವರಪ್ಪನವರು ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ಇದಕ್ಕೂ ಮುನ್ನ ಈಶ್ವರಪ್ಪನವರು ತಮ್ಮ ಬೆಂಬಲಿಗರ ಬಲ ಪ್ರದರ್ಶನ ಮಾಡಲಿದ್ದು, ಶಿವಮೊಗ್ಗದಿಂದ ರಸ್ತೆ ಮಾರ್ಗದ ಮೂಲಕ ಸಾವಿರಾರು ಬೆಂಬಲಿಗರೊಂದಿಗೆ ರಾಜ್ಯ ರಾಜಧಾನಿಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕಡೂರಿನಲ್ಲಿ ಹಾಗೂ ನೆಲಮಂಗಲದಲ್ಲಿ ಬೆಂಬಲಿಗರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಮಾರ್ಗ ಮಧ್ಯೆ ತುಮಕೂರಿನ ಸಿದ್ದಗಂಗಾ ಮಠಕ್ಕೂ ಈಶ್ವರಪ್ಪ ಭೇಟಿ ನೀಡಲಿದ್ದಾರೆ.
ಇಂದು ಶಿವಮೊಗ್ಗದಲ್ಲಿ ತಮ್ಮ ಸಚಿವ ಸ್ಥಾನದ ಕೊನೆ ಕಾರ್ಯಕ್ರಮಗಳಲ್ಲಿ ಈಶ್ವರಪ್ಪನವರು ಪಾಲ್ಗೊಂಡಿದ್ದು, ಮೊದಲಿಗೆ ತೇವರ ಚಟ್ನಹಳ್ಳಿಯಲ್ಲಿ ನಿರ್ಮಿಸಿರುವ ಮ್ಯಾರೇಜ್ ಹಾಲ್ ಉದ್ಘಾಟಿಸಿದ್ದಾರೆ. ಬಳಿಕ ಪುತ್ರ ಕಾಂತೇಶ್ ಹಾಗೂ ತಮ್ಮ ಬೆಂಬಲಿಗರೊಂದಿಗೆ ಈಶ್ವರಪ್ಪನವರು ಅಲ್ಲಿಯೇ ಉಪಹಾರ ಸೇವಿಸಿದ್ದಾರೆ. ನಂತರ ಬಿಜೆಪಿ ಕಛೇರಿಗೆ ಈಶ್ವರಪ್ಪನವರು ತೆರಳಿದ್ದು, ಸಭೆಯೊಂದರಲ್ಲಿ ಪಾಲ್ಗೊಂಡಿದ್ದಾರೆ.
ಇಂದು ಸಂಜೆ ಬೆಂಗಳೂರಿನಲ್ಲಿ ರಾಜೀನಾಮೆ ನೀಡಿದ ಬಳಿಕ ತಮ್ಮ ಸರ್ಕಾರಿ ಕಾರನ್ನು ಹಸ್ತಾಂತರಿಸಲಿರುವ ಈಶ್ವರಪ್ಪ, ಬಳಿಕ ಬೆಂಬಲಿಗರೊಂದಿಗೆ ರಾತ್ರಿ 11 ಗಂಟೆ ರೈಲಿನಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆಂದು ತಿಳಿದುಬಂದಿದೆ.