ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ಹೋರಾಟ ಕೈಗೊಂಡಿದ್ದ ಮೂವರು ರೈತರು ಮೃತಪಟ್ಟಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಮೃತಪಟ್ಟ ಈ ರೈತರಿಗೆ ಹುತಾತ್ಮ ಸ್ಥಾನಮಾನ ನೀಡಬೇಕೆಂದು ದೆಹಲಿ ಗಡಿಭಾಗದಲ್ಲಿ ಆಂದೋಲನ ನಡೆಸುತ್ತಿರುವ ರೈತರು ಒತ್ತಾಯಿಸಿದ್ದಾರೆ.
ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದ ರೈತರು ಮೃತಪಟ್ಟಿದ್ದಾರೆ. ಇದು ರೈತರ ಯುದ್ಧ ಭೂಮಿಯಾಗಿದ್ದು, ಅವರನ್ನು ರೈತರ ಆಂದೋಲನದ ಹುತಾತ್ಮರು ಎಂದು ಗೌರವಿಸಬೇಕೆಂದು ಪಂಜಾಬ್ ನ ಮೊಗಾದ ರೈತ ಸತೀಂದರ್ ಸಿಂಗ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಸರಿಯಾಗಿ ಸ್ಪಂದಿಸದ ಕಾರಣ 3 ಜನ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೂವರು ಅಮಾಯಕರು ಮೃತಪಟ್ಟ ನಂತರವೂ ಸರ್ಕಾರ ನಿರ್ಲಕ್ಷ ಭಾವನೆ ತೋರುತ್ತಿದೆ. ಇನ್ನೂ ಹೆಚ್ಚಿನ ಸಂಖ್ಯೆಯ ರೈತರು ಸಾಯಲು ಸರ್ಕಾರ ಕಾಯುತ್ತಿದೆ. ಆದರೆ, ನಾವು ನಮ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಸಾಲದಲ್ಲಿ ಮುಳುಗಿದ ನಂತರ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾವು ಇಲ್ಲೇ ಸಾಯುತ್ತೇವೆ ಎಂದು ರೈತ ಹರಿಸಿಂಗ್ ಹೇಳಿದ್ದಾರೆ.