ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಭೀತಿಯ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಉದ್ಯೋಗಿಗಳ ಸಂಖ್ಯೆಯನ್ನು ಕಡಿತ ಮಾಡುತ್ತಿವೆ. ಈ ಕ್ರಮದಿಂದಾಗಿ ಕಳೆದ ವರ್ಷಾಂತ್ಯದಿಂದ ಈವರೆಗೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದು, ಮುಂದಿನ ದಿನಗಳಲ್ಲೂ ಈ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.
ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿಗಳು ಯಾವುದೇ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈಗ ಬಹಿರಂಗವಾಗಿರುವ ಘಟನೆಯೊಂದು ಇದಕ್ಕೆ ಪುಷ್ಟಿ ನೀಡುವಂತಿದೆ. ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ, ಬಡ್ತಿ ವಿಷಯಗಳನ್ನು ನಿರ್ವಹಿಸಲು ಕಂಪನಿ ಹಾಗೂ ಉದ್ಯೋಗಿಗಳ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುವ ಗೂಗಲ್ ಕಂಪನಿಯ ಮಾನವ ಸಂಪನ್ಮೂಲದ ಉದ್ಯೋಗಿಯೊಬ್ಬರು ಈಗ ಕೆಲಸ ಕಳೆದುಕೊಂಡಿದ್ದಾರೆ.
ಅವರು ಕೆಲಸ ಕಳೆದುಕೊಂಡಿರುವುದರಲ್ಲಿ ಅಚ್ಚರಿ ಏನಿಲ್ಲ, ಆದರೆ ಅವರನ್ನು ಕೆಲಸದಿಂದ ತೆಗೆದು ಹಾಕಿರುವ ವಿಧಾನ ಮಾತ್ರ ಚರ್ಚೆಗೆ ಕಾರಣವಾಗಿದೆ. ಅಮೆರಿಕಾದಲ್ಲಿನ ಗೂಗಲ್ ಕಂಪನಿಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಈ ವ್ಯಕ್ತಿ ಹೊಸ ಉದ್ಯೋಗಿಯ ನೇಮಕಕ್ಕಾಗಿ ಆನ್ ಲೈನ್ ಸಂದರ್ಶನ ನಡೆಸುತ್ತಿದ್ದರು.
ಈ ವೇಳೆ ಇದ್ದಕ್ಕಿದ್ದಂತೆಯೇ ಅವರ ದೂರವಾಣಿ ಸಂಪರ್ಕ ಕಡಿತವಾಗಿದ್ದು, ಆ ಬಳಿಕ ಅವರು ಇ-ಮೇಲ್ ಪರಿಶೀಲಿಸಿದ ವೇಳೆ ಕೆಲಸದಿಂದ ತೆಗೆದು ಹಾಕಿರುವ ಸಂದೇಶ ಕಂಡು ಬಂದಿದೆ. ಅಲ್ಲದೆ ಈ ಕಾರಣಕ್ಕಾಗಿಯೇ ಅವರು ಸಂದರ್ಶನ ಮಾಡುತ್ತಿದ್ದ ವೇಳೆಯೇ ದೂರವಾಣಿ ಕರೆಯನ್ನು ಸ್ಥಗಿತಗೊಳಿಸಿರುವುದು ಬಹಿರಂಗವಾಗಿದೆ.