ಹೊಸ ವರ್ಷಾಚರಣೆಗೆ ಇನ್ನು ಒಂದು ವಾರವಷ್ಟೇ ಬಾಕಿ ಇದ್ದು, ರಾಜ್ಯದಾದ್ಯಂತ ಇದಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಿರುವ ಜನತೆ ಅಲ್ಲಿಗೆ ತೆರಳಲು ರೆಡಿಯಾಗುತ್ತಿರುವುದರ ಮಧ್ಯೆ ಈ ಉತ್ಸಾಹಕ್ಕೆ ತಣ್ಣೀರೆರಚುವಂತೆ ಕೊರೊನಾ ಮಹಾಮಾರಿ ಆತಂಕ ಸೃಷ್ಟಿಸಿದೆ.
ಚೀನಾ, ಅಮೆರಿಕಾ, ಜಪಾನ್ ಮೊದಲಾದ ದೇಶಗಳಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಚೀನಾದಲ್ಲಿ ಕಂಡು ಬಂದಿರುವ ಬಿಎಫ್ 7 ರೂಪಾಂತರಿ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ಮೂರ್ನಾಲ್ಕು ಮಂದಿಗೆ ಇದು ತಗುಲಿದೆ ಎನ್ನಲಾಗಿದ್ದು, ಆದರೆ ಅವರುಗಳು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ.
ಆದರೆ ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಬಾರದೆಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ, ಜನಜಂಗುಳಿ ಸೇರುವ ಹೊಸ ವರ್ಷಾಚರಣೆಯಂದು ಕೆಲವೊಂದು ನಿರ್ಬಂಧಗಳನ್ನು ಹೇರಲು ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಹೊಸ ವರ್ಷಾಚರಣೆಗೆ ಸಂಪೂರ್ಣ ನಿರ್ಬಂಧ ಹೇರುವ ಬದಲು ಮಾಸ್ಕ್ ಧಾರಣೆ ಕಡ್ಡಾಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮೊದಲಾದ ನಿಯಮಗಳನ್ನು ಮತ್ತೆ ಹೇರುವ ಸಿದ್ಧತೆ ಇದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಈ ಕುರಿತ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.