2021ನೇ ವರ್ಷದ ಕೊನೆಯ ತಿಂಗಳಿನಲ್ಲಿ ನಾವಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷಕ್ಕೆ ಕಾಲಿಡಲಿದ್ದೇವೆ. ಹೊಸ ವರ್ಷಕ್ಕೆ ಎಂಟ್ರಿ ಕೊಡುತ್ತಿದ್ದಂತೆಯೇ ಬ್ಯಾಂಕ್ಗೆ ಸಂಬಂಧಿಸಿದಂತೆ ಕೆಲವು ದೊಡ್ಡ ನಿಯಮಗಳೂ ಸಹ ಬದಲಾಗಲಿದೆ.
ಇದರ ಜೊತೆಯಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರಿಗೂ ಒಂದು ಶಾಕ್ ಕಾದಿದೆ. ಅಂದರೆ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ಇನ್ಮೇಲೆ ನಿಗದಿತ ಮಿತಿಗಿಂತ ಹೆಚ್ಚಿನ ಹಣವನ್ನು ಠೇವಣಿ ಇರಿಸಲು ಅಥವಾ ಹಿಂಪಡೆಯಲು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಜನವರಿ 1ರಿಂದ ಈ ನಿಯಮವು ಅನ್ವಯಿಸಲಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕಿನಲ್ಲಿ ಮೂರು ರೀತಿಯ ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ. ಬ್ಯಾಂಕ್‌ನಲ್ಲಿ ಇನ್ನೂ ಅನೇಕ ಸೌಲಭ್ಯಗಳು ಇವೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ ಖಾತೆಯಿಂದ ಪ್ರತಿ ತಿಂಗಳು ನಾಲ್ಕು ಬಾರಿ ಹಣವನ್ನು ತೆಗೆಯಬಹುದಾಗಿದೆ. ಇದಾದ ಬಳಿಕ ಗ್ರಾಹಕರು ಪ್ರತಿ ಟ್ರಾನ್ಸಾಕ್ಷನ್ಗೆ ಕನಿಷ್ಟ 25 ರೂಪಾಯಿಗಳನ್ನು ಪಾವತಿ ಮಾಡಬೇಕು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಉಳಿತಾಯ ಮತ್ತು ಚಾಲ್ತಿ ಖಾತೆಗಳಲ್ಲಿ ಒಂದು ತಿಂಗಳಲ್ಲಿ ರೂ. 10,000 ಠೇವಣಿ ಮಾಡಲು ಯಾವುದೇ ಶುಲ್ಕವಿರುವುದಿಲ್ಲ. ಈ ಮಿತಿಗಿಂತ ಹೆಚ್ಚಿನ ಠೇವಣಿಗಳಿಗೆ ಗ್ರಾಹಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.
ಮೂಲ ಉಳಿತಾಯ ಖಾತೆ ಹೊರತುಪಡಿಸಿ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಿಂದ ಪ್ರತಿ ತಿಂಗಳು 25,000 ರೂ.ಗಳನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ಅದೇ ಸಮಯದಲ್ಲಿ, ಉಚಿತ ಮಿತಿಯ ನಂತರ ನೀವು ಪ್ರತಿ ಬಾರಿ ಹಣವನ್ನು ಹಿಂಪಡೆಯಲು ಕನಿಷ್ಠ 25 ರೂಪಾಯಿಗಳನ್ನು ಪಾವತಿಸಬೇಕು ಎಂದು ಬ್ಯಾಂಕ್ ಹೇಳಿದೆ.