ಹೊಸ ವರ್ಷ ಆರಂಭವಾಗ್ತಿದ್ದಂತೆ ಕಾರುಗಳೂ ದುಬಾರಿಯಾಗ್ತಿವೆ. ಜನವರಿ 1ರಿಂದ್ಲೇ ಕಾರುಗಳ ಬೆಲೆ ಏರಿಕೆಯಾಗತೊಡಗಿದೆ. ಕಿಯಾ ಮೋಟಾರ್ಸ್ ಕೂಡ ತನ್ನ ಎಲ್ಲಾ ಕಾರುಗಳ ಬೆಲೆಯನ್ನು 1 ಲಕ್ಷ ರೂಪಾಯಿವರೆಗೆ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ. ಪರಿಷ್ಕೃತ ಬೆಲೆಗಳು ಜನವರಿ 1ರಿಂದ್ಲೇ ಜಾರಿಗೆ ಬಂದಿವೆ.
ಏರುತ್ತಿರುವ ಸರಕುಗಳ ಬೆಲೆಗಳನ್ನು ಸರಿದೂಗಿಸಲು ಮತ್ತು ಏಪ್ರಿಲ್‌ನಲ್ಲಿ ಬರುವ ಹೊಸ ಎಮಿಷನ್ ಮಾನದಂಡಗಳ ಹಿನ್ನೆಲೆಯಲ್ಲಿ ಕಾರುಗಳ ನವೀಕರಣ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಭಾರತದಲ್ಲಿ ಕಿಯಾ ಸೋನೆಟ್, ಕಿಯಾ ಸೆಲ್ಟೋಸ್, ಕಿಯಾ ಕ್ಯಾರೆನ್ಸ್, ಕಿಯಾ ಕಾರ್ನಿವಲ್, ಕಿಯಾ ಇವಿ 6 ಹೀಗೆ 5 ಕಾರುಗಳನ್ನು ಮಾರಾಟ ಮಾಡಲಾಗುತ್ತದೆ. ಕಂಪನಿಯು ಭಾರತದಲ್ಲಿನ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. EV6ನಲ್ಲಿ ಗರಿಷ್ಠ ಹೆಚ್ಚಳವಾಗಿದೆ.
Kia EV6: ಕಿಯಾ EV6ನ ಎರಡೂ ಮಾಡೆಲ್‌ನ ಕಾರುಗಳ ಬೆಲೆಯನ್ನು ಲಕ್ಷ ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಸದ್ಯ ಈ ಎಲೆಕ್ಟ್ರಿಕ್ ಕಾರಿನ ಬೆಲೆ 60.95 ಲಕ್ಷದಿಂದ 65.95 ಲಕ್ಷಕ್ಕೆ ತಲುಪಿದೆ. ಕಾರ್ನಿವಲ್‌ನ ಬೆಲೆಯಲ್ಲಿ ಬದಲಾವಣೆಯಾಗಿಲ್ಲ. MPV ಬೆಲೆ 30.99 ಲಕ್ಷದಿಂದ 35.49 ಲಕ್ಷದವರೆಗೆ ಇದೆ.
ಕಿಯಾ ಸೆಲ್ಟೋಸ್: ಕಿಯಾ ಸೆಲ್ಟೋಸ್ 1.4L ಟರ್ಬೊ ಪೆಟ್ರೋಲ್ ರೂಪಾಂತರವು ಈಗ 40,000 ರೂಪಾಯಿಗಳಷ್ಟು ದುಬಾರಿಯಾಗಿದೆ. 1.5 ಲೀಟರ್ NA ಪೆಟ್ರೋಲ್ ರೂಪಾಂತರದ ಬೆಲೆ 20,000 ರೂಪಾಯಿ ಏರಿಕೆಯಾಗಿದೆ. SUVಯ 1.5 ಲೀಟರ್ ಡೀಸೆಲ್ ಕಾರಿನ ಬೆಲೆಯನ್ನು 50,000 ರೂಪಾಯಿಗಳಷ್ಟು ಏರಿಕೆ ಮಾಡಲಾಗಿದೆ. ಪರಿಷ್ಕೃತ ಬೆಲೆ 10.69 ಲಕ್ಷದಿಂದ 19.15 ಲಕ್ಷದವರೆಗಿದೆ.
ಕಿಯಾ ಕ್ಯಾರೆನ್ಸ್: Kia Carens MPV 1.5 ಲೀಟರ್ ಪೆಟ್ರೋಲ್ ರೂಪಾಂತರದ ಬೆಲೆ 20,000 ರೂಪಾಯಿ ಹೆಚ್ಚಾಗಿದೆ ಮತ್ತು 1.4 ಲೀಟರ್ ಟರ್ಬೊ ಪೆಟ್ರೋಲ್ ರೂಪಾಂತರದ ಬೆಲೆಯು 25,000 ರೂಪಾಯಿ ಏರಿಕೆ ಕಂಡಿದೆ. ಡೀಸೆಲ್ ವೇರಿಯಂಟ್ ಈಗ 45,000 ರೂಪಾಯಿಗಳಷ್ಟು ದುಬಾರಿಯಾಗಿದೆ. ಸದ್ಯ ಕಾರಿನ ಹೊಸ ಬೆಲೆ 10.20 ಲಕ್ಷದಿಂದ 18.45 ಲಕ್ಷ ರೂಪಾಯಿವರೆಗಿದೆ.
Kia Sonet: ಇದು ಭಾರತದಲ್ಲಿ ಲಭ್ಯವಿರುವ ಕಿಯಾ ಇಂಡಿಯಾ ಕಾರುಗಳಲ್ಲಿ ಅತ್ಯಂತ ಅಗ್ಗದ್ದು. ಸೋನೆಟ್‌ನ 1.0 ಲೀಟರ್ ಟರ್ಬೊ-ಪೆಟ್ರೋಲ್ ರೂಪಾಂತರದ ಬೆಲೆಗಳು 25,000 ರೂಪಾಯಿಗಳಷ್ಟು ಹೆಚ್ಚಾಗಿವೆ. ಆದರೆ ಡೀಸೆಲ್ ರೂಪಾಂತರವು ಮೊದಲಿಗಿಂತ 40,000 ರೂಪಾಯಿ ದುಬಾರಿಯಾಗಿದೆ. ಇದರ 1.2 ಲೀಟರ್ ಪೆಟ್ರೋಲ್ ಆವೃತ್ತಿಯ ಬೆಲೆ 20,000 ರೂಪಾಯಿ ಹೆಚ್ಚಾಗಿದೆ.