ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂಬ ಕೂಗು ಬಹಳ ಕಾಲದಿಂದ ಕೇಳಿ ಬರುತ್ತಿದ್ದು, ಈ ಕುರಿತಂತೆ ಎನ್.ಪಿ.ಎಸ್. ನೌಕರ ಸಂಘದ ವತಿಯಿಂದ ‘ಮಾಡು ಇಲ್ಲವೇ ಮಡಿ’ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಹೊಸ ಪಿಂಚಣಿ ವ್ಯವಸ್ಥೆ ಜಾರಿಯಾಗಿರುವ ಕಾರಣ ಸರ್ಕಾರಿ ನೌಕರರಿಗೆ ನಿವೃತ್ತಿ ಬಳಿಕ ಯಾವುದೇ ಭದ್ರತೆ ಇಲ್ಲದಂತಾಗಿದೆ. ಹೀಗಾಗಿ ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮರು ಜಾರಿಗೊಳಿಸಬೇಕು ಎಂದು ಈ ಹೋರಾಟ ನಡೆದಿದ್ದು, ಇದರ ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಂದರ್ಭದಲ್ಲಿ ಮಾತನಾಡಿದ ಅವರು, ಹೊಸ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ರದ್ದುಗೊಳಿಸಲು ಆಗ್ರಹಿಸಿ ಏಪ್ರಿಲ್ ನಿಂದ ನಿರ್ಣಾಯಕ ಹೋರಾಟ ರೂಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣಿಗಾಗಿ ರಚಿಸಲಾಗಿರುವ 7ನೇ ವೇತನ ಆಯೋಗದ ಸವಲತ್ತುಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆಯಲು ಆದ್ಯತೆ ನೀಡಲಾಗಿದೆ. ಬರುವ ಮಾರ್ಚ್ ಅಂತ್ಯದ ವೇಳೆಗೆ ವರದಿ ಅನುಷ್ಠಾನಕ್ಕೆ ಮನವಿ ಮಾಡಲಾಗಿದ್ದು, ಶೇಕಡ 40ರಷ್ಟು ವೇತನ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದಿದ್ದಾರೆ.