ಹೊಸ ಪಿಂಚಣಿ ಯೋಜನೆಯನ್ನು ವಿರೋಧಿಸಿ ಎನ್.ಪಿ.ಎಸ್. ನೌಕರರ ಸಂಘ ‘ಮಾಡು ಇಲ್ಲವೇ ಮಡಿ’ ಹೋರಾಟವನ್ನು ಕೈಗೊಂಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಹಳೆ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು ಎಂಬುದು ಎನ್.ಪಿ.ಎಸ್. ನೌಕರರ ಆಗ್ರಹವಾಗಿದೆ.
ಹೊಸ ಪಿಂಚಣಿ ಯೋಜನೆಯಿಂದಾಗಿ ನಿವೃತ್ತಿ ಬಳಿಕ ಸರ್ಕಾರಿ ನೌಕರರ ಭವಿಷ್ಯದ ಜೀವನಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಇದರಿಂದಾಗಿ ನೌಕರರು ಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದ್ದು, ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ.
ಇದೀಗ ರಾಜ್ಯ ಸರ್ಕಾರಿ ನೌಕರರ ಸಂಘವೂ ಸಹ ಹೊಸ ಪಿಂಚಣಿ ನೀತಿ ರದ್ಧತಿಗಾಗಿ ಹೋರಾಟಕ್ಕೆ ಧುಮುಕಲು ಮುಂದಾಗಿದ್ದು, ಮಾರ್ಚ್ ನಂತರ ನಮ್ಮ ಹೋರಾಟ ಆರಂಭವಾಗಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ. ಇದರಿಂದಾಗಿ ಎನ್.ಪಿ.ಎಸ್. ನೌಕರರ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಲಿದ್ದು, ಜಯ ಲಭಿಸುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.