ಕಾರು ಖರೀದಿ ಮಾಡೋದು ಬಹಳ ದೊಡ್ಡ ನಿರ್ಧಾರ. ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಕಾರು ಕೊಳ್ಳುವ ಮುನ್ನ ಗ್ರಾಹಕರು ಸಾಕಷ್ಟು ಮುಂದಾಲೋಚನೆ ಮಾಡಿರುತ್ತಾರೆ. ಕಾರಿನ ಫೀಚರ್, ಮಾಡೆಲ್, ಬೆಲೆಗಳಲ್ಲಿನ ವ್ಯತ್ಯಾಸ ಎಲ್ಲವನ್ನೂ ತಿಳಿದುಕೊಳ್ಳಬೇಕು. ಇದರ ಜೊತೆಜೊತೆಗೆ ನೀವು ಯಾವ ತಿಂಗಳಲ್ಲಿ ಕಾರು ಖರೀದಿ ಮಾಡುತ್ತಿದ್ದೀರಾ ಎಂಬುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಯಾಕೆಂದರೆ ಬೇರೆ ಬೇರೆ ತಿಂಗಳಿನಲ್ಲಿ ಕಾರಿನ ಬೆಲೆ ಬೇರೆ ಬೇರೆ ತೆರನಾಗಿರಬಹುದು. ಸಾಮಾನ್ಯವಾಗಿ ಜನರು ಡಿಸೆಂಬರ್‌ನಲ್ಲಿ ಕಾರು ಖರೀದಿಸಬೇಕೇ ಅಥವಾ ಜನವರಿಯಲ್ಲಿ ಕಾರು ಖರೀದಿಸಬೇಕೇ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಜನವರಿಯಲ್ಲಿ ಹೊಸ ವರ್ಷಕ್ಕೆ ಕಾರು ಕೊಳ್ಳೋಣ ಅನ್ನೋದು ಎಷ್ಟೋ ಜನರ ಲೆಕ್ಕಾಚಾರ. ಆದರೆ ಅಗ್ಗವಾಗಿ ಕಾರನ್ನು ಕೊಂಡುಕೊಳ್ಳಲು ಡಿಸೆಂಬರ್ ನಿಮಗೆ ಉತ್ತಮ ತಿಂಗಳು. ಇದಕ್ಕೆ ಕೆಲವು ಕಾರಣಗಳಿವೆ.
1. ಭಾರೀ ರಿಯಾಯಿತಿ: ಬಹುತೇಕ ಕಾರು ಕಂಪನಿಗಳು ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಕಾರುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತವೆ. ಇದು ಬೋನಸ್‌ಗಳನ್ನು ವಿನಿಮಯ ಮಾಡಿಕೊಳ್ಳಲು ನಗದು ರಿಯಾಯಿತಿಗಳು ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಈ ತಿಂಗಳು ಕೆಲವು ಕಾರುಗಳು 2.5 ಲಕ್ಷದವರೆಗೆ ರಿಯಾಯಿತಿಯನ್ನು ಪಡೆಯುತ್ತಿವೆ.
2. ಜನವರಿಯಲ್ಲಿ ಬೆಲೆ ಏರಿಕೆ: ಇನ್ನೊಂದು ದೊಡ್ಡ ಕಾರಣವೆಂದರೆ ಜನವರಿಯಲ್ಲಿ ಕಾರಿನ ಬೆಲೆಗಳು ಹೆಚ್ಚಾಗುತ್ತವೆ. ಮಾರುತಿ, ಟಾಟಾ ಮೋಟಾರ್ಸ್, ಮರ್ಸಿಡಿಸ್ ಹೀಗೆ ಬಹುತೇಕ ಎಲ್ಲಾ ಆಟೋಮೊಬೈಲ್ ಕಂಪನಿಗಳು ವಾಹನಗಳ ಬೆಲೆಯನ್ನು ಜನವರಿಯಲ್ಲಿ ಹೆಚ್ಚಿಸುವುದಾಗಿ ಘೋಷಿಸುತ್ತವೆ. ಡಿಸೆಂಬರ್‌ನಲ್ಲಿ ನಿಮಗೆ ಡಿಸ್ಕೌಂಟ್‌ನಲ್ಲಿ ಸಿಗುವ ಕಾರಿನ ಬೆಲೆ ಜನವರಿಯಲ್ಲಿ ಹೆಚ್ಚಾಗಿರುತ್ತದೆ.
3. ಮರುಮಾರಾಟ ಮೌಲ್ಯದಲ್ಲಿ ಗಮನಾರ್ಹ ವ್ಯತ್ಯಾಸವಿಲ್ಲ: ಕಾರಿನ ತಯಾರಿಕೆಯ ದಿನಾಂಕದಲ್ಲಿನ ಒಂದು ವರ್ಷದ ವ್ಯತ್ಯಾಸವು ಮರುಮಾರಾಟದ ಮೌಲ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಅನೇಕರು ನಂಬಿದ್ದಾರೆ. ಇದು ಸಂಪೂರ್ಣವಾಗಿ ತಪ್ಪು. ಕೆಲವು ವರ್ಷಗಳ ನಂತರ ಕಾರನ್ನು ಮಾರಾಟ ಮಾಡುವಾಗ, ಆ ಸಮಯದಲ್ಲಿ ಹೊಸ ಕಾರಿನ ಬೆಲೆ ಹೆಚ್ಚು ಮುಖ್ಯವಾಗಿರುತ್ತದೆ. ನಿಮ್ಮ ಕಾರು ಯಾವ ವರ್ಷದಲ್ಲಿ ತಯಾರಾಗಿದೆ ಎಂಬುದಕ್ಕೆ ಹೆಚ್ಚು ಮಹತ್ವವಿರುವುದಿಲ್ಲ. ಹಾಗಾಗಿ ಕಾರು ಕೊಳ್ಳುವ ಇಚ್ಛೆ ಇರುವವರಿಗೆ ಡಿಸೆಂಬರ್ ಸೂಕ್ತ ಸಮಯ.