ಉರಿಯುತ್ತಿರುವ ಕಟ್ಟಡದೊಳಗೆ ಸಿಕ್ಕಿಬಿದ್ದ ಇಬ್ಬರು ಮಕ್ಕಳನ್ನು ಆಪದ್ಬಾಂಧವನೊಬ್ಬ ರಕ್ಷಿಸಿರುವ ಘಟನೆ ಅರಿಝೋನಾದಲ್ಲಿ ನಡೆದಿದೆ.
ಗಿಲ್ಬರ್ಟ್ ರಸ್ತೆ ಮತ್ತು ಸದರ್ನ್ ಅವೆನ್ಯೂ ಬಳಿ ಇರುವ ಮೆಸಾ ಅಪಾರ್ಟ್‌ಮೆಂಟ್‌ನಲ್ಲಿ ಫೆಬ್ರವರಿ 18 ರಂದು ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿಯಲಾರಂಭಿಸಿದೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಎರಡು ಮನೆಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಮೇಲ್ಛಾವಣಿಯಿಂದ ಜ್ವಾಲೆಯನ್ನು ನಂದಿಸುವಾಗ ಇಬ್ಬರು ಮಕ್ಕಳು ಇನ್ನೂ ಅಪಾರ್ಟ್ಮೆಂಟ್ ಒಳಗೆ ಸಿಲುಕಿಕೊಂಡಿದ್ದಾರೆ ಎಂಬುದು ಅವರಿಗೆ ಗೊತ್ತಾಗಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಆಪದ್ಭಾಂದವನಂತೆ ಬಂದ ವ್ಯಕ್ತಿಯೊಬ್ಬರು ಉರಿಯುತ್ತಿರುವ ಅಪಾರ್ಟ್‌ಮೆಂಟ್‌ನ ಗಾಜನ್ನು ಒಡೆಯುತ್ತಿರುವುದನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಆತ ಕಿಟಕಿಯ ಮೂಲಕ ಏರಿ ಮಕ್ಕಳನ್ನು ರಕ್ಷಿಸಿದ್ದಾರೆ. ಕೆಳಗೆ ನಿಂತಿದ್ದ ಪೊಲೀಸ್ ಅಧಿಕಾರಿ ಕೈಗೆ ಸುರಕ್ಷಿತವಾಗಿ ಒಂದು ಮಗುವನ್ನು ಹಸ್ತಾಂತರಿಸಿದ್ದಾರೆ. ನಂತರ ಮತ್ತೊಂದು 6 ವರ್ಷದ ಮಗುವನ್ನು ಕೂಡ ಬೆಂಕಿಯಿಂದ ಕಾಪಾಡಿದ್ದಾರೆ. ಮಕ್ಕಳಿಬ್ಬರನ್ನೂ ತಪಾಸಣೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಆ ವ್ಯಕ್ತಿ ತನ್ನ ಕಾರಿನಲ್ಲಿದ್ದರು. ಕೂಗು ಕೇಳಿದ ಕೂಡಲೇ ಒಂದು ಕ್ಷಣವು ಯೋಚನೆ ಮಾಡದ ಅವರು ಕೂಡಲೇ ಸಹಾಯಕ್ಕಾಗಿ ದೌಡಾಯಿಸಿದ್ದಾರೆ. ಗೋಡೆಯನ್ನು ಹಾರಿ ಮಕ್ಕಳಿಬ್ಬರ ಪಾಲಿಗೆ ಆಪಂದ್ಭಾಂದವನಾಗಿ ಬಂದಿದ್ದಕ್ಕೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.