ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದ 19 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಪರಾರಿಯಾಗಿದ್ದರು. ಇದೀಗ ಆಕೆಯನ್ನು ಪತ್ತೆ ಹಚ್ಚಿರುವ ಪೊಲೀಸರು ತಾಯಿ ಹಾಗೂ ಮಗುವನ್ನು ಒಂದುಗೂಡಿಸಿದ್ದಾರೆ.
ಇಂತಹದೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮಗುವಿಗೆ ಜನ್ಮ ನೀಡಿ ಬಳಿಕ ಶೌಚಾಲಯದ ಬಳಿ ಮಗು ಇಟ್ಟು ಹೋಗಿದ್ದರು. ಮಗುವಿನ ಅಳು ಕೇಳಿದ ಸಿಬ್ಬಂದಿ ಬಳಿಕ ರಕ್ಷಿಸಿ ಆಸ್ಪತ್ರೆ ಅಧೀಕ್ಷಕರ ಗಮನಕ್ಕೆ ತಂದಿದ್ದರು.
ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಯುವತಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕರೆತಂದು ವಿಚಾರಿಸಿದಾಗ ಮೊದಲಿಗೆ ಆ ಮಗು ತನ್ನದಲ್ಲ ಎಂದು ಹೇಳಿದ್ದು, ಬಳಿಕ ಒಪ್ಪಿಕೊಂಡಿದ್ದಾಳೆ.
ಅಲ್ಲದೆ ತಾನು ಕುಟುಂಬಸ್ಥರಿಗೆ ತಿಳಿಸದೆ ಈಗಾಗಲೇ ಮದುವೆಯಾಗಿದ್ದು, ಇದರಿಂದ ಮಗು ಜನಿಸಿದೆ. ಆದರೆ ಕುಟುಂಬದವರ ಭಯದಿಂದ ಈ ಕೃತ್ಯ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ. ಇದೀಗ ಅಕೆಗೆ ಕೌನ್ಸೆಲಿಂಗ್ ಮಾಡಿ ತಾಯಿ – ಮಗುವನ್ನು ಒಂದು ಮಾಡಲಾಗಿದೆ.