ಕೆಲವರಿಗೆ ಏನಾದರೂ ತಿಂದರೆ ಹೊಟ್ಟೆ ನೋಯುವುದು ಅಥವಾ ಹೊಟ್ಟೆ ಉಬ್ಬರಿಸಿದಂತೆ ಆಗುವುದು ಆಗುತ್ತಿರುತ್ತದೆ.
ಪದೇ ಪದೇ ಈ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್
ಕಡುಬು ಅಥವಾ ಉದ್ದಿನ ದೋಸೆ ತಿಂದಾಕ್ಷಣ ಗ್ಯಾಸ್ಟ್ರಿಕ್ ಸಮಸ್ಯೆ ಬಿಡದೆ ಕಾಡುತ್ತದೆ. ಇದರ ನಿವಾರಣೆಗೆ ಮಾತ್ರೆಯ ಮೊರೆ ಹೋಗುವ ಬದಲು ಪುದೀನಾ ಎಲೆಗಳ ಚಹಾ ತಯಾರಿಸಿ ಕುಡಿಯಿರಿ. ಒಂದು ಲೋಟ ನೀರಿಗೆ ಎಂಟು ಪುದೀನಾ ಎಲೆಗಳನ್ನು ಹಾಕಿ. 10 ನಿಮಿಷ ಕುದಿಸಿ. ಈ ನೀರು ಕಹಿಯಾಗಿರುವ ಕಾರಣಕ್ಕೆ ಒಂದು ಚಮಚ ಜೇನು ತುಪ್ಪ ಸೇರಿಸಿ ಕುಡಿಯಿರಿ.
ಇಲ್ಲವೇ ಒಂದು ಕಪ್ ನೀರಿಗೆ ಜಜ್ಜಿದ ಸೋಂಪು ಕಾಳು ಹಾಕಿ ಚೆನ್ನಾಗಿ ಕುದಿಸಿ. ಇದು ದಪ್ಪವಾಗುತ್ತಿದ್ದಂತೆ ಕೆಳಗಿಳಿಸಿ. ಸೋಸಿ ಕುಡಿಯಿರಿ.
ಇದೇ ರೀತಿಯಲ್ಲಿ ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಮಾಡಲು ತಿಂಡಿಯೊಂದಿಗೆ ಶುಂಠಿ ಚಟ್ನಿ ತಯಾರಿಸಿ ತಿನ್ನುವದೂ ಒಳ್ಳೆಯದು.
ನಿತ್ಯ ಖಾಲಿ ಹೊಟ್ಟೆಗೆ ಲೆಮನ್ ವಾಟರ್ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹತ್ತಿರ ಸುಳಿಯವುದೇ ಇಲ್ಲ. ಉಗುರು ಬೆಚ್ಚಗಿನ ಬಿಸಿ ನೀರಿಗೆ ನಿಂಬೆ ರಸ ಹಿಂಡಿ ಕುಡಿಯುವುದರಿಂದ ಹೊಟ್ಟೆಯುಬ್ಬರದ ಸಮಸ್ಯೆ ಕಡಿಮೆಯಾಗುತ್ತದೆ.
ಊಟದ ಬಳಿಕ ಒಂದು ಬಾಳೆಹಣ್ಣು ತಿನ್ನುವುದರಿಂದಲೂ ನಿಮ್ಮ ಹೊಟ್ಟೆಯುಬ್ಬರದ ಸಮಸ್ಯೆಯನ್ನು ಕಡಿಮೆ ಮಾಡಬಹುದು.