ಕರಿದ ತಿಂಡಿಗಳು ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಭಾರತದಲ್ಲಿ ತುಂಬಾ ಹೆಚ್ಚಾಗಿದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಸಾಮಾನ್ಯವಾಗಿಬಿಟ್ಟಿವೆ. ಅಜೀರ್ಣ, ಗ್ಯಾಸ್, ಮಲಬದ್ಧತೆ, ಅಸಿಡಿಟಿಯಂತಹ ತೊಂದರೆಗಳು ಇಂತಹ ಆಹಾರಗಳಿಂದಲೇ ಸೃಷ್ಟಿಯಾಗುತ್ತವೆ. ಇಂತಹ ತಿನಿಸುಗಳನ್ನು ತಿಂದಾಗ ಹೊಟ್ಟೆಯಿಂದ ಗುಡು ಗುಡು ಎಂಬ ಶಬ್ಧ ಬರಲು ಪ್ರಾರಂಭಿಸುತ್ತದೆ.
ಅದನ್ನು ನಿರ್ಲಕ್ಷಿಸಿದ್ರೆ ಇನ್ನೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹೊಟ್ಟೆಯಲ್ಲಿ ಈ ರೀತಿ ಶಬ್ಧವಾಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೊಟ್ಟೆ ಗ್ರೌಲಿಂಗ್ ಎಂದು ಕರೆಯಲಾಗುತ್ತದೆ. ಆಹಾರದ ಜೀರ್ಣಕ್ರಿಯೆಯು ಸಂಭವಿಸುವಾಗ ಈ ಶಬ್ದವು ಹೊಟ್ಟೆ ಮತ್ತು ಕರುಳಿನ ನಡುವೆ ಬರುತ್ತದೆ. ಒಂದು ಅಥವಾ ಎರಡು ಬಾರಿ ಅಂತಹ ಶಬ್ದ ಕೇಳಿದರೆ ಗಾಬರಿಯಾಗುವ ಅಗತ್ಯವಿಲ್ಲ. ಆದರೆ ಇದು ಮತ್ತೆ ಮತ್ತೆ ಸಂಭವಿಸಿದರೆ ಅದು ಯಾವುದೋ ಗಂಭೀರ ಕಾಯಿಲೆಯ ಸಂಕೇತ ಎಂಬುದನ್ನು ಅರ್ಥಮಾಡಿಕೊಳ್ಳಿ.
ಆಹಾರವು ಜೀರ್ಣಕ್ರಿಯೆಗಾಗಿ ನಮ್ಮ ಸಣ್ಣ ಕರುಳನ್ನು ತಲುಪಿದಾಗ, ದೇಹವು ಆಹಾರಗಳ ವಿಭಜನೆ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಗಾಗಿ ಜೀರ್ಣಕಾರಿ ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಹಸಿವಾದಾಗ ಹೊಟ್ಟೆಯಲ್ಲಿ ಈ ರೀತಿ ಶಬ್ಧವಾಗುತ್ತದೆ. ಆದರೆ ಪದೇ ಪದೇ ಈ ರೀತಿ ಆಗುವುದು ಜೀರ್ಣಕ್ರಿಯೆಗೆ ಸಂಬಂಧಿಸಿದ ಕೆಲವು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು. ಸಮಯಕ್ಕೆ ಸರಿಯಾಗಿ ಇದನ್ನು ಪತ್ತೆಹಚ್ಚುವುದು ಬಹಳ ಮುಖ್ಯ.
ಜೀರ್ಣಕ್ರಿಯೆ ಹೊರತು ಪಡಿಸಿ ಯಾವುದೇ ಕಾರಣಕ್ಕೂ ಹೀಗಾಗುತ್ತಿಲ್ಲ ಎಂಬುದನ್ನು ಪರೀಕ್ಷೆಯ ಮೂಲಕವೇ ತಿಳಿದುಕೊಳ್ಳಬೇಕು. ಹೊಟ್ಟೆಯಿಂದ ಶಬ್ಧ ಪದೇ ಪದೇ ಬರುತ್ತಿದ್ದರೆ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕು. ಸಣ್ಣ ಅಂತರದಲ್ಲಿ ಲಘು ಆಹಾರವನ್ನು ಸೇವಿಸಬೇಕು. ದಿನಕ್ಕೆ 2 ಬಾರಿ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು. ಇದನ್ನು ನಿಯಮಿತವಾಗಿ ಮಾಡುವುದರಿಂದ ಹೊಟ್ಟೆಯಿಂದ ಬರುವ ಶಬ್ದ ನಿಲ್ಲುವ ಸಾಧ್ಯತೆ ಇರುತ್ತದೆ.