ಕಿಡ್ನಿ ಕಸಿ ಮಾಡಬೇಕೆಂದರೆ ದಾನಿ ಹಾಗೂ ತೆಗೆದುಕೊಳ್ಳುವ ರೋಗಿಯ ರಕ್ತದ ಗುಂಪು ಹೊಂದಾಣಿಕೆ ಆದರೆ ಮಾತ್ರ ಸಾಧ್ಯ ಎಂದು ಹೇಳಲಾಗುತ್ತದೆ. ಆದರೆ ಅಪರೂಪದ ಪ್ರಕರಣ ಒಂದರಲ್ಲಿ ಹುಬ್ಬಳ್ಳಿಯ ಕಿಮ್ಸ್ ವೈದ್ಯರು ಹೊಂದಾಣಿಕೆಯಾಗದ ರಕ್ತದ ಗುಂಪಿನ ಕಿಡ್ನಿ ಕಸಿ ಮಾಡಿ ಯಶಸ್ವಿಯಾಗಿದ್ದಾರೆ.
ರಾಜ್ಯದಲ್ಲೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆ ಒಂದರಲ್ಲಿ ಈ ಅಪರೂಪದ ಕಿಡ್ನಿ ಕಸಿ ನಡೆದಿದ್ದು, ಮೂತ್ರಶಾಸ್ತ್ರ ಮತ್ತು ರೋಗಶಾಸ್ತ್ರ ವಿಭಾಗದ ತಜ್ಞ ವೈದ್ಯರ ಪರಸ್ಪರ ಸಹಕಾರದೊಂದಿಗೆ ಇದು ಸಾಧ್ಯವಾಗಿದೆ. ಅಲ್ಲದೆ ಕಿಮ್ಸ್ ನಲ್ಲಿ ಲಭ್ಯವಿದ್ದ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಸಹ ಇದಕ್ಕೆ ಪೂರಕವಾಗಿದ್ದವು.
25 ವರ್ಷದ ಅಭಿಷೇಕ ಬೋಗಾರ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಆತನಿಗೆ 48 ವರ್ಷದ ಆತನ ತಾಯಿ ಪದ್ಮಾವತಿ ಕಿಡ್ನಿ ನೀಡಲು ಮುಂದಾಗಿದ್ದರು. ಆದರೆ ಅಭಿಷೇಕ್ ಎ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದರೆ, ತಾಯಿ ಬಿ ಪಾಸಿಟಿವ್ ರಕ್ತದ ಗುಂಪು ಹೊಂದಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ತಜ್ಞ ವೈದ್ಯರು ವಿವಿಧ ಪ್ರಕ್ರಿಯೆಗಳ ಮೂಲಕ ಅಂತಿಮವಾಗಿ ರೋಗಿಗೆ ಕಿಡ್ನಿ ಕಸಿ ಮಾಡಿದ್ದಾರೆ. ಈ ಮೂಲಕ ಯುವಕನಿಗೆ ಹೊಸ ಬದುಕು ಸಿಕ್ಕಂತಾಗಿದೆ.