ಅಪಾಯಕಾರಿ ಸಾಹಸಗಳು, ಮೋಜಿನ ವಿಡಿಯೋಗಳು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅನೇಕರು ತಮ್ಮ ಪ್ರಾಣದ ಹಂಗನ್ನೇ ತೊರೆದು ಹುಚ್ಚು ಸಾಹಸಕ್ಕೆ ಕೈಹಾಕ್ತಾರೆ. ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯ ಅಮರಿಯಾದಲ್ಲಿ ಇಂಥದ್ದೇ ಘಟನೆಯೊಂದು ನಡೆದಿದೆ.
ಪ್ರಮುಖ ಮಾರುಕಟ್ಟೆಯಲ್ಲಿ ಯುವಕನೊಬ್ಬ ಹೈವೋಲ್ಟೇಜ್ ತಂತಿಗಳ ಮೇಲೆ ಹುಚ್ಚು ಸಾಹಸ ಮಾಡಿದ್ದಾನೆ. ತಂತಿಗಳ ಮೇಲೆ ಬ್ಯಾಲೆನ್ಸ್ ಮಾಡುತ್ತ ನಡೆಯಲು ಯತ್ನಿಸಿದ್ದಾನೆ. ಇದನ್ನು ನೋಡಲು ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.
ಜನರನ್ನು ನೋಡಿದ್ದೇ ತಡ ಯುವಕ ಮತ್ತಷ್ಟು ಜೋಶ್‌ನಲ್ಲಿ ವಿದ್ಯುತ್ ತಂತಿ ಮೇಲೆ ಬ್ಯಾಲೆನ್ಸ್ ಮಾಡಲು ಯತ್ನಿಸಿದ್ದಾರೆ. ಆತ ನೇತಾಡಿದ ತಂತಿಗಳ ಮೂಲಕ 11 ಕೆವಿ ವಿದ್ಯುತ್ ಹರಿಯುತ್ತದೆ. ಅದು ಹೈ-ಟೆನ್ಷನ್ ಘಟಕದ ತಂತಿ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು. ಹಾಗಾಗಿ ಕರೆಂಟ್ ಇಲ್ಲದ್ದರಿಂದ ಯುವಕ ಬಚಾವ್ ಆಗಿದ್ದಾನೆ.
ದಿಢೀರನೆ ವಿದ್ಯುತ್ ಸಂಪರ್ಕವೇನಾದ್ರೂ ಬಂದಿದ್ದರೆ ಭಾರೀ ಅನಾಹುತವಾಗುತ್ತಿತ್ತು. ಯುವಕ ವಿದ್ಯುತ್ ತಂತಿ ಮೇಲೆ ನಡೆಯುತ್ತಿರುವುದನ್ನು ನೋಡಿದ ಸಾರ್ವಜನಿಕರು ಕೂಡಲೇ ಇಲಾಖೆಯ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆ ಲೈನ್‌ಗೆ ಕರೆಂಟ್ ಕನೆಕ್ಷನ್ ಕೊಡದಂತೆ ಮನವಿ ಮಾಡಿಕೊಂಡಿದ್ದಾರೆ. ಕೆಲಹೊತ್ತಿನಲ್ಲೇ ಸ್ಥಳಕ್ಕೆ ಬಂದ ವಿದ್ಯುತ್ ಇಲಾಖೆ ಅಧಿಕಾರಿಗಳು, ಆತನನ್ನು ಕೆಳಕ್ಕಿಳಿಸಿದ್ರು.
ಹುಚ್ಚು ಸಾಹಸ ಮಾಡ್ತಿದ್ದ ವ್ಯಕ್ತಿಯನ್ನು ನೌಶಾದ್ ಎಂದು ಗುರುತಿಸಲಾಗಿದೆ. ಆತ ಗಾಡಿಯಲ್ಲಿ ಬಳೆಗಳನ್ನು ಇಟ್ಟುಕೊಂಡು ಮಾರಾಟ ಮಾಡ್ತಾನೆ. ಇಂಟರ್ನೆಟ್‌ನಲ್ಲಿ ವೈರಲ್ ಆಗಬೇಕು ಅನ್ನೋ ಕಾರಣಕ್ಕೆ ಇಂತಹ ಸಾಹಸಕ್ಕೆ ಕೈಹಾಕಿದ್ರೆ ಅಪಾಯ ತಪ್ಪಿದ್ದಲ್ಲ. ಪ್ರಾಣಕ್ಕೇ ಅದು ಸಂಚಕಾರ ತರಬಹುದು.