ಹೈದರಾಬಾದ್: ಚಲಿಸುವ ಎಸ್ಕಲೇಟರ್‌ನಿಂದ ಜಾರಿ ಬಿದ್ದು 10 ಮಕ್ಕಳು ಗಾಯಗೊಂಡಿರುವ ಘಟನೆ ಹೈದರಾಬಾದ್ ನ ಬಂಜಾರಾ ಹಿಲ್ಸ್‌ನ ಮಾಲ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವದ ಅಂಗವಾಗಿ ‘ಗಾಂಧಿ’ ಚಲನಚಿತ್ರದ ಉಚಿತ ಪ್ರದರ್ಶನವನ್ನು ವೀಕ್ಷಿಸಲು ಮಕ್ಕಳು ಮಲ್ಟಿಪ್ಲೆಕ್ಸ್‌ಗೆ ಬಂದಿದ್ದರು. ಈ ವೇಳೆ ಮಕ್ಕಳು ಎಸ್ಕಲೇಟರ್ ಅನ್ನು ಹತ್ತಿದ್ದಾರೆ. ಈ ವೇಳೆ ಅದರ ವೇಗ ಹೆಚ್ಚಾಗಿ ವಿದ್ಯಾರ್ಥಿಗಳು ಅದರ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಕೂಡಲೇ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ತೆಲಂಗಾಣ ಸರ್ಕಾರವು ದೇಶಭಕ್ತಿ ಮತ್ತು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವ ಸಲುವಾಗಿ ಸಿನಿಮಾ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. 40,000 ವಿದ್ಯಾರ್ಥಿಗಳಿಗೆ ಸಿನಿಮಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು. 75 ವರ್ಷಗಳ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುಮಾರು 22 ಲಕ್ಷ ಮಕ್ಕಳಿಗಾಗಿ 552 ಚಿತ್ರಮಂದಿರಗಳಲ್ಲಿ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.