
ಹೌದು, ಹೋಲಿಡಿಫೈ ಸಹ-ಸಂಸ್ಥಾಪಕ ಕೋವಿದ್ ಕಪೂರ್ ಅವರು ಟ್ವಿಟ್ಟರ್ ನಲ್ಲಿ ಹಾಸ್ಯಮಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇವರ ಹೆಸರನ್ನು ಕೇಳಿದ ಜನರೆಲ್ಲಾ ನಕ್ಕಿದ್ದಾರಂತೆ. ಹೀಗಾಗಿ ಮೊದಲನೆಯದಾಗಿ ಇವರು ಕೊರೋನಾ ವೈರಸ್ ರೋಗಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ತನ್ನ ವಿದೇಶಿ ಪ್ರವಾಸಗಳು ವಿನೋದಮಯವಾಗಿರುತ್ತದೆ ಎಂದು ಅವರು ಹಾಸ್ಯಚಟಾಕಿ ಹಾರಿಸಿದ್ದಾರೆ.
ಕೋವಿದ್ ಎಂಬ ಅವರ ಹೆಸರಿನ ಪದದ ಅರ್ಥ ವಿದ್ವಾಂಸ ಅಥವಾ ಕಲಿತ ಎಂದರ್ಥವಂತೆ. ಈ ಹೆಸರು ಹನುಮಾನ್ ಚಾಲೀಸಾದಿಂದ ಬಂದಿದೆ ಎಂದು ಅವರು ವಿವರಿಸಿದ್ದಾರೆ. ಶಾರುಖ್ ಖಾನ್ ಅವರ ಸಂಭಾಷಣೆಯನ್ನು ನೆನಪಿಸುತ್ತಾ, ತನ್ನ ಹೆಸರು ಕೋವಿಡ್ ಮತ್ತು ನಾನು ವೈರಸ್ ಅಲ್ಲ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.
ಇನ್ನು ತಮ್ಮ ಹೆಸರಿನ ಉಚ್ಛಾರಣೆಯನ್ನು ಸಹ ಹಂಚಿಕೊಂಡಿರುವ ಇವರು, ತನ್ನ ಹೆಸರು ಕೋವಿಡ್ ಅಲ್ಲ ಕೋವಿದ್ ಎಂದು ಸ್ಪಷ್ಟಪಡಿಸಿದ್ದಾರೆ. ಡ್ ಅಲ್ಲ ದ್ ಅಕ್ಷರ ಎಂದು ಹೇಳಿದ್ದಾರೆ.
ಇನ್ನು ಕೋವಿದ್ ಅವರು ಕರೋನಾ ಬಿಯರ್ ಅನ್ನು ಆನಂದಿಸುತ್ತಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ತನ್ನ 30ನೇ ಹುಟ್ಟುಹಬ್ಬಕ್ಕೆ ತನ್ನ ಸ್ನೇಹಿತರು ಕೇಕ್ ಆರ್ಡರ್ ಮಾಡಿದ್ದು, ಇಲ್ಲೂ ಕೂಡ ಬೇಕರ್ ಎಡವಟ್ಟು ಮಾಡಿದ್ದಾಗಿ ತಿಳಿಸಿದ್ದಾರೆ. ತಪ್ಪಾಗಿ ಕೋವಿಡ್ ಎಂದು ಬರೆಯಲಾಗಿದ್ದು, ನಂತರ ಕೋವಿದ್ ಎಂಬುದಾಗಿ ಸರಿಪಡಿಸಲಾಯ್ತು ಎಂದು ತಿಳಿಸಿದ್ದಾರೆ.
ಹೀಗೆ ಕೋವಿಡ್ ಭಾರತಕ್ಕೆ ಕಾಲಿಟ್ಟ ನಂತರ ತನ್ನ ಹೆಸರಿಂದ ಎಷ್ಟೆಲ್ಲಾ ಜನರು ರಂಜನೆ ಪಡೆದಿದ್ದಾರೆ ಎಂಬುದಾಗಿ ಅವರು ಸವಿವರವಾಗಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದು, ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗಿದೆ.