ಹೆರಿಗೆಯಲ್ಲಿ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿರೋ ಮಹಿಳೆ ತನ್ನ ನೋವಿನ ನಡುವೆಯೂ ಸಾರ್ಥಕತೆ ಮೆರೆದಿದ್ದಾಳೆ. ಅನಾರೋಗ್ಯ ಪೀಡಿತ ಶಿಶುಗಳಿಗೆ ಎದೆಹಾಲನ್ನು ದಾನ ಮಾಡ್ತಿದ್ದಾಳೆ.
38 ವಾರಗಳ ಗರ್ಭಿಣಿಯಾಗಿದ್ದ ಸಾರಾ ಲೆಂಪ್ಲೆ ಎಂಬಾಕೆಗೆ ಇದ್ದಕ್ಕಿದ್ದಂತೆ ರಕ್ತಸ್ರಾವ ಆರಂಭವಾಗಿತ್ತು. ಗರ್ಭಕೋಶದಲ್ಲಿ ಮಗು ಸರಿಯಾದ ಸ್ಥಾನದಲ್ಲಿರದೇ ಇದ್ದಿದ್ದರಿಂದ ಸಾರಾಗೆ ಅಲ್ಲಲ್ಲಿ ರಕ್ತ ಹೆಪ್ಪುಗಟ್ಟಿತ್ತಂತೆ.
ತಕ್ಷಣವೇ ಆಪರೇಷನ್ ಮಾಡಿ ಮಗುವನ್ನು ಹೊರತೆಗೆಯಲಾಯ್ತು, ಆದ್ರೆ ಮಗು ಬದುಕಲೇ ಇಲ್ಲ. ವೈದ್ಯರು ಸಾರಾಳನ್ನು ಬಚಾವ್ ಮಾಡಿದ್ದಾರೆ. ಈ ಆಘಾತದಿಂದ ಸಾರಾ ಇನ್ನೂ ಚೇತರಿಸಿಕೊಂಡಿಲ್ಲ. ಆದರೂ ಅಮೆರಿಕದ ಅಲಬಾಮಾದಲ್ಲಿರೋ ಮದರ್ಸ್ ಮಿಲ್ಕ್ ಬ್ಯಾಂಕ್ ಗೆ ಎದೆಹಾಲನ್ನು ದಾನ ಮಾಡ್ತಿದ್ದಾಳೆ.
ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ಹಾಗೂ ಅವಧಿಗೂ ಮುನ್ನವೇ ಜನಿಸಿದ ಮಕ್ಕಳಿಗೆ ಇದರಿಂದ ಅನುಕೂಲವಾಗುತ್ತಿದೆ. ಮಗು ಕಳೆದುಕೊಂಡ ನೋವಿನ ಜೊತೆಗೆ ಪ್ರತಿದಿನ ಎದೆಹಾಲನ್ನು ವ್ಯರ್ಥವಾಗಿ ಚೆಲ್ಲಬೇಕು ಎಂಬ ಬೇಸರ ನನಗಿತ್ತು. ಆದರೆ ಈಗ ಸಾರ್ಥಕತೆ ಮೂಡಿದೆ ಎಂದು ಸಾರಾ ಕೂಡ ಹೇಳಿದ್ದಾಳೆ.