ಚಳಿಗಾಲದ ಸಮಯದಲ್ಲಿ ಮನೆಯಿಂದ ಹೊರಗಡೆ ಕಾಲಿಡೋಕೆ ಜನರು ಹಿಂದೇಟು ಹಾಕುತ್ತಾರೆ. ಹಾಯಾಗಿ ಬೆಚ್ಚಗೆ ಮನೆಯಲ್ಲಿರಲು ಹಲವರು ಇಷ್ಟಪಡುತ್ತಾರೆ.
ಮೈನಸ್ ಡಿಗ್ರಿ ಇರುವಂತಹ ತಾಪಮಾನದಲ್ಲಂತೂ ಸ್ನಾನ ಮಾಡೋಕೆ ಕಷ್ಟಕಷ್ಟ. ಅಂಥಾದ್ರಲ್ಲಿ ತಣ್ಣೀರಿನ ಸ್ನಾನವನ್ನು ಕಲ್ಪಿಸಿಕೊಳ್ಳಲು ಕೂಡ ಅಸಾಧ್ಯ. ಅದ್ರಲ್ಲೂ ಮೈಯಲ್ಲಿ ಬಟ್ಟೆಯಿಲ್ಲದೆ ಮಂಜುಗಡ್ಡೆಯ ಸರೋವರದಲ್ಲಿ ಈಜೋದು ಅಂದ್ರೆ ಸುಮ್ನೆನಾ..? ಕೇಳಿದ್ರೆನೇ ಮೈಯಲ್ಲಿ ನಡುಕ ಬರುತ್ತೆ ಅಲ್ವಾ..?
ವೃತ್ತಿಪರ ಕ್ರೀಡಾಪಟುವಾಗಿರುವ ಬೋರಿಸ್ ಒರಾವೆಕ್ ಅವರು ಇತ್ತೀಚೆಗೆ ತನ್ನ ಸ್ನೇಹಿತರು ಮತ್ತು ತಂಡದ ಸದಸ್ಯರಿಗೆ ಒಂದು ರೀತಿಯ ಮೈನರ್ ಹಾರ್ಟ್ ಅಟ್ಯಾಕ್ ನೀಡಿದ್ದಾರೆ. ಮಂಜುಗಡ್ಡೆಯ ಸರೋವರದಲ್ಲಿ ಈಜು ಹೊಡೆದ ವಿಡಿಯೋವನ್ನು ಅವರು ಇನ್ಸ್ಟಾಗ್ರಾಂ ಹಾಗೂ ಟಿಕ್ ಟಾಕ್ ನಲ್ಲಿ ಹಂಚಿಕೊಂಡಿದ್ದಾರೆ.
ಹೌದು, 31 ವರ್ಷ ವಯಸ್ಸಿನ ಬೋರಿಸ್ ಒರಾವೆಕ್, ಹೆಪ್ಪುಗಟ್ಟಿದ ಸರೋವರದ ಕೆಳಗೆ ಈಜುವ ಮುಖಾಂತರ ದಿಗ್ಭ್ರಮೆ ಮೂಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಮತ್ತು ಟಿಕ್‌ಟಾಕ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಭಾರಿ ವೈರಲ್ ಆಗಿದೆ.
ಮಂಜುಗಡ್ಡೆಯ ನೀರಿನಲ್ಲಿ ಧುಮುಕಿದ ಬೋರಿಸ್, ಮಂಜುಗಡ್ಡೆಯ ತೆಳುವಾದ ಪದರದಡಿಯಲ್ಲಿ ಆತನ ಚಲನೆಯನ್ನು ಕ್ಯಾಮರಾ ಟ್ರ್ಯಾಕ್ ಮಾಡಿದೆ. ತೆಳುವಾದ ಮಂಜುಗಡ್ಡೆಯ ಅಡಿಯಲ್ಲಿ ಬೋರಿಸ್ ಸರಾಗವಾಗಿ ಚಲಿಸಿದ್ದಾರೆ. ಆದರೆ ಇದ್ದಕ್ಕಿದ್ದಂತೆ ತನ್ನ ದಿಕ್ಕಿನ ಚಲನೆಯನ್ನು ಕಳೆದುಕೊಂಡಾಗ, ತಂಡದ ಸದಸ್ಯರು ನೇರವಾಗಿ ಮುಂದುವರಿಯಲು ಸೂಚಿಸಿದ್ದರಿಂದ ತನ್ನ ದಾರಿಗೆ ಹಿಂತಿರುಗಿದ್ದಾನೆ.
ಬೋರಿಸ್ ತನ್ನ ದಾರಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಾಗ ತಂಡದ ಸದಸ್ಯರು ಭಯಭೀತರಾಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವ್ಯಕ್ತಿಯೊಬ್ಬರು ಮಂಜುಗಡ್ಡೆಯನ್ನು ಒಡೆಯುವ ಪ್ರಯತ್ನವನ್ನು ಮಾಡಿ ಜಾರಿ ಬೀಳುತ್ತಾರೆ. ಅದೃಷ್ಟವಶಾತ್, ಬೋರಿಸ್ ತನ್ನ ದಾರಿಯನ್ನು ಕಂಡುಕೊಳ್ಳುತ್ತಾನೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ ಗಳನ್ನು ಪಡೆದುಕೊಂಡಿದೆ. ವರದಿಗಳ ಪ್ರಕಾರ, ಈ ಸ್ಟಂಟ್ ಅನ್ನು ಸ್ಲೋವಾಕಿಯಾದಲ್ಲಿ ಚಿತ್ರೀಕರಿಸಲಾಗಿದೆ.
https://www.youtube.com/watch?v=8f3Ic0-A2fk