ಹೈದರಾಬಾದ್ : ಹೆರಿಗೆಗೂ ಮುನ್ನಾ ದಿನವೇ ಗರ್ಭಿಣಿ ಆತ್ಮಹತ್ಯೆ ಮಾಡಿಕೊಂಡಿರುವ ದೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಮತ್ತೊಮ್ಮೆ ಹೆಣ್ಣು ಮಗು ಆಗಬಹುದು. ಇದರಿಂದ ಮನೆಯಲ್ಲಿ ಕೀಳಾಗಿ ಕಾಣುತ್ತಾರೆ. ಚಿತ್ರಹಿಂಸೆ ನೀಡುತ್ತಾರೆ ಎಂಬ ಭಯದಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ರಮ್ಯಾ ಎಂಬ ಮಹಿಳೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು 9 ತಿಂಗಳ ಗರ್ಭಿಣಿಯಾಗಿದ್ದರು. ವೈದ್ಯರು ಗುರುವಾರ ಹೆರಿಗೆಯಾಗಲಿದೆ ಎಂದು ಹೇಳಿದ್ದರು. ಆದರೆ, ಮತ್ತೊಮ್ಮೆ ಹೆಣ್ಣು ಮಗು ಹುಟ್ಟಬಹುದು ಎಂಬ ಭಯದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಗಾಗಲೇ ಈ ಮಹಿಳೆಗೆ 3 ವರ್ಷದ ಆರಾಧ್ಯ ಎಂಬ ಹೆಣ್ಣು ಮಗುವಿದೆ. ಈ ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮನೆಯಲ್ಲಿ ಪ್ರತಿದಿನ ದೂಷಿಸಿದ್ದಾರೆ. ಇದರಿಂದ ನೊಂದು ಹೋಗಿದ್ದ ಮಹಿಳೆ, ಎರಡನೇ ಮಗು ಕೂಡ ಹೆಣ್ಣಾದರೆ, ಮನೆಯಲ್ಲಿ ಚಿತ್ರ ಹಿಂಸ ನೀಡುತ್ತಾರೆ ಎಂಬ ಆತಂಕದಲ್ಲಿ ಹೆರಿಗೆಗೂ ಮುನ್ನಾ ದಿನವೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ರಮ್ಯಾ ಅವರ ತವರು ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.