17 ವರ್ಷದ ದತ್ತು ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ ತಂದೆ – ತಾಯಿ ಹಾಗೂ ಇಬ್ಬರು ಪುತ್ರರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಅಡಿಯಲ್ಲಿ ಮೂರನೇ ಮಗನ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆದರೆ ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪ್ರಾಪ್ತೆ ಬಾಲಕಿಗೆ ಕಳೆದ 2 ವರ್ಷಗಳಿಂದ ಚಿತ್ರಹಿಂಸೆ ನೀಡಲಾಗುತ್ತಿದ್ದು ತನ್ನ ದತ್ತು ತಾಯಿಯ ಮುಂದೆ ಈ ಘಟನೆಯನ್ನು ಬಹಿರಂಗಪಡಿಸಿದರೂ ಮಹಿಳೆ ಇದನ್ನು ನಿರ್ಲಕ್ಷಿಸಿದ್ದಾಳೆ ಎನ್ನಲಾಗಿದೆ. ದತ್ತು ತಂದೆ ಲಾರಿ ರಿಪೇರಿ ಶೆಡ್ ನಡೆಸುತ್ತಿದ್ದಾರೆ. ಅವರ ಇಬ್ಬರ ಪುತ್ರರು ಲಾರಿ ಹಾಗೂ ಕಾರು ಚಾಲಕರಾಗಿದ್ದು ಮೂರನೇ ಪುತ್ರ ಮೊಬೈಲ್ ಫೋನ್ ಸರ್ವೀಸ್ ಸೆಂಟರ್ ಹೊಂದಿದ್ದ ಎನ್ನಲಾಗಿದೆ.
ಈಗ 17 ವರ್ಷದ ಯುವತಿಯಾಗಿರುವ ಈಕೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಈ ದಂಪತಿಗೆ ಹೆಣ್ಣು ಮಗು ಇಲ್ಲದ ಕಾರಣ 2005ರಲ್ಲಿ ದತ್ತು ಪಡೆದಿದ್ದರು. ನಾಲ್ಕು ಮಕ್ಕಳಲ್ಲಿ ಕಿರಿಯವಳಾಗಿದ್ದ ಈಕೆಯನ್ನು ಆಕೆ ಜೈವಿಕ ಪೋಷಕರು ದತ್ತು ನೀಡಿದ್ದರು.
ಈ ಯುವತಿಯು ನಾಲ್ಕು ತಿಂಗಳ ಹಿಂದೆ ಮದುವೆಯೊಂದರಲ್ಲಿ ತನ್ನ ಒಡಹುಟ್ಟಿದವರನ್ನು ಭೇಟಿಯಾಗಿದ್ದಾಳೆ. ಇಲ್ಲಿ ತನಗೆ ಸಾಕು ಪೋಷಕರ ಮನೆಯಲ್ಲಿ ಆಗುತ್ತಿರುವ ಚಿತ್ರಹಿಂಸೆಯ ಬಗ್ಗೆ ಸಹೋದರಿಯರ ಬಳಿಯಲ್ಲಿ ಹೇಳಿಕೊಂಡಿದ್ದಾಳೆ. ಅಲ್ಲಿ ತನಗೆ ಜೀವಕ್ಕೆ ಅಪಾಯವಿದೆ ಎಂದು ಮನೆ ತೊರೆದಿದ್ದೇನೆ ಎಂದೂ ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಯುವತಿ ಇತ್ತೀಚೆಗೆ ಪೊಲೀಸ್ ದೂರು ದಾಖಲಿಸಿದ್ದಾರೆ ಮತ್ತು ತನಿಖೆಯ ನಂತರ, ಆಕೆಯ ಸಾಕು ಪೋಷಕರು ಮತ್ತು ಅವರ ಇಬ್ಬರು ಪುತ್ರರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಮೂರನೇ ಪುತ್ರನಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.