ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸ ಮುಗಿದ ಸಂದರ್ಭದಲ್ಲಿ ಬರುವ ಗೌರಿ – ಗಣಪತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ.
ಹೆಣ್ಣುಮಕ್ಕಳಿಗೆ ಗೌರಿ ಹಬ್ಬ ವಿಶೇಷವಾದುದು. ತವರು ಮನೆಯಿಂದ ಬಾಗಿನ ಕೊಡಲಾಗುತ್ತದೆ. ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ತವರಿನ ದಾರಿಯನ್ನು ಕಾಯುತ್ತಾರೆ.
ಇನ್ನು ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರಿಗೆ ಬರುತ್ತಾರೆ. ಗೌರಮ್ಮನ ದೇವಾಲಯಕ್ಕೆ ತೆರಳಿ ಬಾಗಿನ ಅರ್ಪಿಸುತ್ತಾರೆ.
ಮನೆಗಳಲ್ಲಿ ವಿಶೇಷವಾಗಿ ಅಲಂಕರಿಸಿ ಗೌರಿಯನ್ನು ಪೂಜಿಸಲಾಗುತ್ತದೆ. ಹೆಣ್ಣುಮಕ್ಕಳೆಲ್ಲಾ ಸೇರಿ ಪೂಜೆ ಸಲ್ಲಿಸಿ, ಪೂಜೆಗೆ ಬಂದವರಿಗೆ ಬಾಗಿನ ಕೊಡಲಾಗುತ್ತದೆ.
ಶ್ರಾವಣ ಮಾಸದಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸುವ ಜೊತೆಗೆ ಮಂಗಳಗೌರಿ, ಶುಕ್ರಗೌರಿ. ಎಳೆಗೌರಿ ಪೂಜೆ, ವ್ರತಾಚರಣೆ ಮಾಡುವ ಹೆಣ್ಣುಮಕ್ಕಳು ಗೌರಿ ಹಬ್ಬದಂದು ವಿಶೇಷ ಪೂಜೆಯನ್ನು ನೆರವೇರಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ.
ಗೌರಿ ಹಬ್ಬದ ಸಂದರ್ಭದಲ್ಲಿ ಹೆಣ್ಣುಮಕ್ಕಳು ತವರಿಗೆ ಬಂದಾಗ ಏನೂ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ತವರಿಗೆ ಬರುವ ಹೆಣ್ಣುಮಕ್ಕಳು ಸಂತೋಷದಿಂದ ಹಾರೈಸಿದರೆ, ಒಳಿತಾಗುತ್ತದೆ ಎಂಬ ನಂಬಿಕೆ ಇದೆ.
ಶಿವನ ಪತ್ನಿ ಗೌರಿ ಭೂಲೋಕಕ್ಕೆ ಬಂದಾಗ ಎಲ್ಲರಿಗೂ ಒಳಿತಾಗಲಿ ಮಳೆ, ಬೆಳೆ ಆಗಿ ಸಮೃದ್ಧಿಯಿಂದ ತವರಿನವರು ಇರಲಿ ಎಂದು ಹಾರೈಸುತ್ತಾಳೆ. ಹಾಗಾಗಿ ತವರಿಗೆ ಬಂದ ಹೆಣ್ಣು ಮಕ್ಕಳಿಗೆ ಬಟ್ಟೆ, ಬಾಗಿನ, ಉಡುಗೊರೆ ಕೊಡಲಾಗುತ್ತದೆ. ಇದು ಗೌರಿಹಬ್ಬದ ವಿಶೇಷವಾಗಿದೆ.