ಜೆಡಿಎಸ್ – ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾಗಿದ್ದ ‘ಬಾಂಬೆ ಬಾಯ್ಸ್’ ಈಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಬಹುತೇಕರು ಮಂತ್ರಿಯಾಗಿದ್ದು, ಹೆಚ್. ವಿಶ್ವನಾಥ್ ಅವರಿಗೆ ಅವಕಾಶ ಸಿಕ್ಕಿಲ್ಲ. ವಿಧಾನಸಭಾ ಚುನಾವಣೆಗೆ ಇನ್ನು ಐದಾರು ತಿಂಗಳು ಬಾಕಿ ಇದ್ದು, ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳಾಗುತ್ತಿವೆ.
ಇದರ ಮಧ್ಯೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಅದರಲ್ಲೂ ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.
ಹೆಚ್. ವಿಶ್ವನಾಥ್ ಮತ್ತೆ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇವರ ಜೊತೆ ಬಿಜೆಪಿ ಸೇರ್ಪಡೆಗೊಂಡಿದ್ದ ಇತರೆ ನಾಯಕರ ಮುಂದಿನ ನಡೆ ಏನು ಎಂಬುದು ಈಗ ಚರ್ಚೆಗೆ ಕಾರಣವಾಗಿದೆ. ಸಚಿವ ಎಂಟಿಬಿ ನಾಗರಾಜ್, ಈ ಹಿಂದೆ ಸಮಾರಂಭ ಒಂದರಲ್ಲಿ ಮಾತನಾಡುವ ವೇಳೆ ಬಿಜೆಪಿಗೆ ಬಂದಿದ್ದಕ್ಕೆ ತಾವು ವಿಧಾನಸಭಾ ಚುನಾವಣೆಯಲ್ಲಿ ಸೋಲುವಂತಾಯಿತು ಎಂದು ಹೇಳಿದ್ದು, ಅವರೂ ಸಹ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕೆಲವೊಂದು ಬದಲಾವಣೆಗಳು ಸಂಭವಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.