ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಕ್ಷೇತ್ರದ ಮೇಲಿರುವ ಉದಾಸೀನತೆ ಹಾಗೂ ಅವರ ನಾಯಕತ್ವ ವೈಫಲ್ಯದಿಂದ ಬೇಸತ್ತು ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಸಿ.ಪಿ. ಯೋಗೀಶ್ವರ್ ಹೇಳಿದ್ದಾರೆ. ರಾಮನಗರದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕ್ಷೇತ್ರದ ಜನತೆಗೆ ಕುಮಾರಸ್ವಾಮಿ ಮೇಲೆ ಹತಾಶ ಮನೋಭಾವನೆ ಮೂಡಿದೆ ಎಂದು ಹೇಳಿದರು.
ಕುಮಾರಸ್ವಾಮಿಯ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ. 3-4 ಮಂದಿ ಕಾಂಟ್ರ್ಯಾಕ್ಟರ್ ಮೂಲಕ ಆಡಳಿತ ನಡೆಸುವ ಕೆಲಸ ಮಾಡ್ತಿದ್ದಾರೆ. ಚೆನ್ನಪಟ್ಟಣದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಿಜೆಪಿ ಯಾರಿಗೂ ಹಣ ನೀಡಿ ತಮ್ಮತ್ತ ಸೆಳೆಯುತ್ತಿಲ್ಲ. ಆದರೆ ಜೆಡಿಎಸ್ನಿಂದ ಬೇಸತ್ತು ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಬರುತ್ತಿದ್ದಾರೆ ಎಂದು ಹೇಳಿದರು.
ಈಗೀಗ ಕುಮಾರಸ್ವಾಮಿ ಮುಂಜಾನೆ ಸುಮಾರಿಗೆ ತಾಲೂಕಿನ ಕಡೆಗೆ ಬರುತ್ತಿದ್ದಾರೆ. ತಿಥಿ, ಮದುವೆಗಳಿಗೆ ಹಾಜರಾಗುತ್ತಿದ್ದಾರೆ, ಇದೇ ಕುಮಾರಸ್ವಾಮಿ ಕಳೆದ ನಾಲ್ಕು ವರ್ಷಗಳಿಂದ ಎಲ್ಲಿಗೆ ಹೋಗಿದ್ದರು..? ನಾನು ಕ್ಷೇತ್ರ ಪ್ರವಾಸ ಕೈಗೊಂಡ ಬಳಿಕ ಕುಮಾರಸ್ವಾಮಿ ಆ್ಯಕ್ಟಿವ್ ಆಗಿದ್ದಾರೆ. ಕುಮಾರಸ್ವಾಮಿ ಹಾಗೂ ಡಿಕೆಶಿ ಬ್ರದರ್ಸ್ ಇಬ್ಬರೂ ನನಗೆ ಸಮಾನ ಶತ್ರುಗಳು ಎಂದು ಗುಡುಗಿದರು.