ತಮ್ಮಿಂದ ಹೆಚ್ಚುವರಿಯಾಗಿ ಪಡೆದಿದ್ದ ಇಪ್ಪತ್ತು ರೂಪಾಯಿ ಹಿಂಪಡೆಯಲು ನಿವೃತ್ತ ಶಿಕ್ಷಕರೊಬ್ಬರು ಕಾನೂನು ಹೋರಾಟ ನಡೆಸಿದ್ದು, ಎರಡು ವರ್ಷಗಳ ಬಳಿಕ ಅವರಿಗೆ ಜಯ ಸಿಕ್ಕಿದೆ. ಇಂತದ್ದೊಂದು ಸ್ವಾರಸ್ಯಕರ ಪ್ರಕರಣದ ವಿವರ ಇಲ್ಲಿದೆ.
ಮೈಸೂರಿನ ನಿವೃತ್ತ ಶಿಕ್ಷಕ ಸತ್ಯನಾರಾಯಣ ಎಂಬವರು 2019ರಲ್ಲಿ ಮಾರುತಿ ಮ್ಯಾಚಿಂಗ್ ಸೆಂಟರ್ ನಲ್ಲಿ ಮೂರು ಸ್ಯಾರಿ ಫಾಲ್ಸ್ ಗಳನ್ನು ಖರೀದಿ ಮಾಡಿದ್ದರು. ಇವಕ್ಕೆ ತಲಾ 30 ರೂಪಾಯಿಗಳಂತೆ 90 ರೂ. ಪಡೆಯಬೇಕಿತ್ತು. ಎಂ.ಆರ್.ಪಿ. ದರವೂ 30 ರೂಪಾಯಿ ಎಂದು ನಮೂದಾಗಿತ್ತು.
ಆದರೆ ಅಂಗಡಿ ಮಾಲೀಕರು 110 ರೂ. ಗಳನ್ನು ಪಡೆದಿದ್ದು, ಹೆಚ್ಚುವರಿಯಾಗಿ 20 ರೂ. ಪಡೆದಿರುವುದನ್ನು ಪ್ರಶ್ನಿಸಿದ ವೇಳೆ ಬೇಜವಾಬ್ದಾರಿಯ ಉತ್ತರ ನೀಡಿದ್ದರು. ಹೀಗಾಗಿ ಸತ್ಯನಾರಾಯಣ ಅವರು 61,000 ರೂ. ಪರಿಹಾರ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಅಲ್ಲದೆ ಸ್ವತಃ ಸತ್ಯನಾರಾಯಣ ಅವರೇ ವಾದ ಮಾಡಿದ್ದು, ಇದೀಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಪ್ರಕರಣದ ವೆಚ್ಚ ಸೇರಿ 6,020 ರೂ. ಗಳನ್ನು ಪಾವತಿಸುವಂತೆ ಅಂಗಡಿ ಮಾಲೀಕರಿಗೆ ಆದೇಶಿಸಿದೆ. ಆಯೋಗದ ಅಧ್ಯಕ್ಷ ಬಿ. ನಾರಾಯಣಪ್ಪ ಈ ಆದೇಶ ಹೊರಡಿಸಿದ್ದಾರೆ.