ನವದೆಹಲಿ : ದೇಶದಲ್ಲಿ ಕೊರೊನಾ ಹಾಗೂ ಹೊಸ ರೂಪಾಂತರಿ ಓಮಿಕ್ರಾನ್ ನ ಹಾವಳಿ ಹೆಚ್ಚಾಗುತ್ತಿದ್ದು, ದಿನದಿದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಅಲ್ಲದೇ, ಈಗಾಗಲೇ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಹಲವು ರಾಜ್ಯಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗಿದೆ.
ಇದರ ಮಧ್ಯೆಯೇ ಚುನಾವಣೆಗಳು ಕೂಡ ಬಂದಿದ್ದು, ಹಲವು ರಾಜ್ಯಗಳಲ್ಲಿ ಪಕ್ಷಗಳು ಚುನಾವಣೆ ತಯಾರಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸಮಾವೇಶಗಳಿಂದ ದೂರ ಸರಿಯುವುದಾಗಿ ಹೇಳಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಮಾತನಾಡಿದ್ದು, ಜನರ ಆರೋಗ್ಯದ ಹಿತ ದೃಷ್ಟಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ನಿರ್ಧಾರ ಕೈಗೊಂಡಿದೆ. ಮುಂಬರವ ದಿನಗಳಲ್ಲಿ ಚುನಾವಣೆಗೆ ಸಿದ್ಧವಾಗಿರುವ ಉತ್ತರ ಪ್ರದೇಶ, ಗೋವಾ, ಮಣಿಪುರ, ಪಂಜಾಬ್ ಹಾಗೂ ಉತ್ತರಾಖಂಡ್ ಗಳಲ್ಲಿ ರಾಜಕೀಯ ಸಾಮಾವೇಶಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ಏರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರದಿಂದ ಹಿಂದೆ ಸರಿಯುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಉತ್ತರ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸಮಾವೇಶ, ಮ್ಯಾರಾಥಾನ್ ಸೇರಿದಂತೆ ಸಾರ್ವಜನಿಕ ಸಭೆಗಳನ್ನು ರದ್ದುಗೊಳಿಸಿದ್ದು, ದೇಶದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನೆಲ್ಲ ರಾಜಕೀಯ ಸಮಾವೇಶಗಳನ್ನು ರದ್ದು ಮಾಡುವುದಾಗಿ ಹೇಳಿದೆ.
ಇನ್ನುಳಿದ ರಾಜ್ಯಗಳಲ್ಲಿ ಕೂಡ ಈ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ನ ನಾಯಕರು ಹೇಳಿದ್ದಾರೆ. ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಮೇಕೆ ದಾಟು ಯೋಜನೆಗೆ ಆಗ್ರಹಿಸಿ ಸತ್ಯಾಗ್ರಹ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿಯೇ ರಾಜ್ಯದಲ್ಲಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.