ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇದೀಗ ಈ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಇದೇ ಮೊದಲ ಬಾರಿಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಸಿಸಿ ಟಿವಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಗುರುವಾರದಂದು ಗೃಹ ಸಚಿವ ಅರಗ ಜ್ಞಾನೇಂದ್ರ ಇದಕ್ಕೆ ಚಾಲನೆ ನೀಡಿದ್ದಾರೆ.
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರೈಲು, ಬಸ್ ನಿಲ್ದಾಣಗಳು, ಧಾರ್ಮಿಕ ಕೇಂದ್ರಗಳು ಹಾಗೂ ಜನದಟ್ಟಣೆ ಪ್ರದೇಶಗಳು ಸೇರಿದಂತೆ 24 ಆಯಕಟ್ಟಿನ ಜಾಗಗಳಲ್ಲಿ 63 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಂಟ್ರೋಲ್ ರೂಮಿನಲ್ಲಿ ಕುಳಿತ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಗಳ ಕಾಲವೂ ಕಣ್ಗಾವಲು ಇರಿಸಲಿದ್ದಾರೆ. ಅಲ್ಲದೆ ಪ್ರತಿಯೊಂದು ಪ್ರದೇಶದಲ್ಲೂ ಧ್ವನಿವರ್ಧಕವನ್ನು ಹಾಕಲಾಗಿದೆ.
ಯಾವುದಾದರೂ ಅನುಮಾನಾಸ್ಪದ ವಸ್ತು ಹಾಗೂ ವ್ಯಕ್ತಿ ಕಂಡು ಬಂದರೆ ಕಂಟ್ರೋಲ್ ರೂಮಿನಿಂದಲೇ ಗುರುತಿಸುವ ಸಿಬ್ಬಂದಿ ಕೂಡಲೇ ಅಂತಹ ಸ್ಥಳದಲ್ಲಿ ಇರುವ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಕೆಲವೊಂದು ಸೂಚನೆಗಳನ್ನು ಸಹ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಕಂಟ್ರೋಲ್ ರೂಮಿನಿಂದಲೇ ಧ್ವನಿವರ್ಧಕಗಳ ಮೂಲಕ ಏಕಕಾಲದಲ್ಲಿ ಬಿತ್ತರಿಸಬಹುದಾಗಿದೆ. ಪ್ರಾಯೋಗಿಕವಾಗಿ ಇದನ್ನು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ತಂದಿದ್ದು, ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಇದೇ ರೀತಿಯ ಕಂಟ್ರೋಲ್ ರೂಂ ಸ್ಥಾಪನೆ ಮಾಡುವ ಸೂಚನೆಯನ್ನು ಗೃಹ ಸಚಿವರು ನೀಡಿದ್ದಾರೆ.