
ಬೆಂಗಳೂರು: ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೂಡ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ಮಹಾರಾಷ್ಟ್ರದಲ್ಲಿ ಪ್ರತಿ ದಿನ 5 ಸಾವಿರ ಪ್ರಕರಣ ಪತ್ತೆಯಾಗುತ್ತಿದೆ. ನಿನ್ನೆಯೊಂದೇ ದಿನ 6000 ಕೇಸ್ ಪತ್ತೆಯಾಗಿದೆ. 44 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೇರಳದಲ್ಲಿಯೂ ಕೋವಿಡ್ ಪ್ರಕರಣ ಹೆಚ್ಚಿದೆ. ಈ ಎರಡೂ ರಾಜ್ಯಗಳಿಂದ ಕರ್ನಾಟಕಕ್ಕೆ ರಸ್ತೆ ಮಾರ್ಗವಾಗಿ ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, RTPCR ಟೆಸ್ಟ್ ಮಾಡಿಸಲಾಗುತ್ತಿದೆ ಎಂದರು.
ಈವರೆಗೆ 21,02,61,480 ಜನರಿಗೆ ಕೋವಿಡ್ ಸ್ಯಾಂಪಲ್ ಟೆಸ್ಟ್; ಒಂದೇ ದಿನದಲ್ಲಿ 13,993 ಜನರಲ್ಲಿ ಸೋಂಕು ಪತ್ತೆ
ಇದೇ ವೇಳೆ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತಿದ್ದರೂ ಕೂಡ ಆರೋಗ್ಯ ಕಾರ್ಯಕರ್ತರೇ ಇಂದು ಲಸಿಕೆ ಪಡೆದುಕೊಳ್ಳದಿರುವ ವಿಚಾರಕ್ಕೆ ತರಾಟೆಗೆ ತೆಗೆದುಕೊಂಡ ಸಚಿವ ಸುಧಾಕರ್, ಶೇ.51ರಷ್ಟು ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ನಮ್ಮ ರಾಜ್ಯದಲ್ಲಿ ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚು ಅಂದರೆ ಶೇ.78ರಷ್ಟು ಲಸಿಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಅತಿ ಕಡಿಮೆ ಶೇ.36ರಷ್ಟು ಲಸಿಕೆ ಪಡೆಯಲಾಗಿದೆ.
ಆರೋಗ್ಯ ಕಾರ್ಯಕರ್ತರ ಈ ನಿರ್ಲಕ್ಷ್ಯ ಅತ್ಯಂತ ಖೇದಕರ ವಿಷಯ. ಹೀಗೆ ಬೇಜವಾಬ್ದಾರಿ ವಹಿಸುವುದು ಸರಿಯಲ್ಲ. ರಾಜ್ಯದ ಜನರ ಆತ್ಮ ರಕ್ಷಣೆ ನಮ್ಮ ಗುರಿ. ಯಾರು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೋ ಅವರೆಲ್ಲರೂ ಲಸಿಕೆ ಪಡೆಯಿರಿ. ಡಿಸಿಗಳು ಎಸ್ಪಿ ಗಳು ಕೂಡ ಪಡೆಯುತ್ತಿದ್ದಾರೆ. ಆದರೆ ವೈದ್ಯರು, ಸಿಬ್ಬಂದಿಗಳು ಪಡೆಯುತ್ತಿಲ್ಲ. ವೈದ್ಯರಾಗಿ ನಾವೇ ಕೊರೊನಾ ಲಸಿಕೆ ಪಡೆಯದಿದ್ದರೆ ಸಾಮಾನ್ಯ ಜನರು ಹೇಗೆ ಮುಂದೆ ಬಂದು ಲಸಿಕೆ ಪಡೆಯುತ್ತಾರೆ. ವೈದ್ಯರಿಗ್ಯಾರಿಗೂ ಆರೋಗ್ಯದ ಬಗ್ಗೆ, ಕುಟುಂಬದ ಬಗ್ಗೆ ಕಾಳಜಿ ಇಲ್ಲವೇ? ರಾಜ್ಯದಲ್ಲಿ ಲಸಿಕೆ ನೀಡಿಕೆಯಲ್ಲಿ ಶೇ.57ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.