ಕೊರೋನಾ ಜಾಸ್ತಿಯಾಗ್ತಿದ್ದಂತೆ ಮಕ್ಕಳನ್ನ ಶಾಲೆಗೆ ಕಳಿಸಬೇಕೋ ಬೇಡವೋ ಎಂಬ ಗೊಂದಲ ಪೋಷಕರನ್ನ ಹೆಚ್ಚಾಗಿ ಕಾಡುತ್ತಿದೆ. ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಹತ್ತನೇ ತರಗತಿ ಹೊರತುಪಡಿಸಿ ಇನ್ನುಳಿದ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸಲಾಗ್ತಿದೆ. ಆದ್ರೆ ಹಲವು ಜಿಲ್ಲೆಗಳಲ್ಲಿ ಈಗಲೂ ಎಲ್ಲಾ ತರಗತಿ ಮಕ್ಕಳಿಗೆ ಭೌತಿಕ ತರಗತಿ ನಡೆಯುತ್ತಿದ್ದು, ಸರ್ಕಾರಕ್ಕೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿರೊ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು, ರಾಜ್ಯದಲ್ಲಿ ಕೊರೋನಾ ಜಾಸ್ತಿಯಾಗ್ತಿದೆ ನಿಜ ಆದರೆ ಮಕ್ಕಳ ಶಿಕ್ಷಣ ತುಂಬಾ ಮುಖ್ಯ. ಒಂದು ವರ್ಷದಿಂದ ಮಕ್ಕಳ ಮೇಲೆ ಶಿಕ್ಷಣದ ಮೇಲೆ ತುಂಬಾ ಪ್ರಭಾವ ಬೀರಿದೆ, ಹೀಗಾಗಿ ಶಾಲೆಗಳನ್ನ ನಡೆಸಲೇಬೇಕು. ಆದ್ರೆ ಇದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ನಾವು ಆಯಾ ಪ್ರದೇಶಗಳ ಅಂಕಿಅಂಶಗಳನ್ನ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಅಷ್ಟಕ್ಕೂ ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ ತುಂಬಾ ಕಡಿಮೆ ಇದೆ, 117 ತಾಲೂಕುಗಳಲ್ಲಿ ಪಾಸಿಟಿವಿಟಿ ರೇಟ್ 0-1% ಅಷ್ಟೇ ಇದೆ. ಹೆಚ್ಚು ತಾಲೂಕುಗಳಲ್ಲಿ, 5%ಗಿಂತ ಕಡಿಮೆ ಇದೆ. ಹೀಗಿರುವಾಗ ಶಾಲೆಗಳನ್ನ ಬಂದ್ ಮಾಡುವ ಪ್ರಶ್ನೆಯೆ ಇಲ್ಲ. ಜೊತೆಗೆ ಜಿಲ್ಲಾಧಿಕಾರಿಗಳಿಗೆ ಪಾಸಿಟಿವಿಟಿ ರೇಟ್ ನೋಡಿಕೊಂಡು, ಪರಿಸ್ಥಿತಿಗೆ ಅನುಗುಣವಾಗಿ ಶಾಲೆ ಬಂದ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಗ್ರೌಂಡ್ ರಿಯಾಲಿಟಿ ನೋಡಿಕೊಂಡು ಶಾಲೆ ನಡೆಸಲು ತೀರ್ಮಾನ ಮಾಡ್ತೀವಿ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ನಿನ್ನೆ ಸಿಎಂ ಮೀಟಿಂಗ್ ಮಾಡಿದ್ದಾರೆ, ಹೀಗಾಗಿ ಮುಂದಿನ ಕ್ರಮ ಕೈಗೊಳ್ಳಬೇಕು. ಇಂದು ಶಾಲೆಗಳಿಗೆ ಕೊರೊನಾ ಯಾವ ರೀತಿ ಪ್ರಭಾವ ಬೀರಿದೆ ಎಂದು ಅಧಿಕಾರಿಗಳೊಂದಿಗೆ ಸಭೆ ಮಾಡ್ತಿದ್ದೀನಿ. ಎಲ್ಲೆಲ್ಲಿ ಸಾಧ್ಯ ಇದೆ ಅಲ್ಲಿ ಸ್ಕೂಲ್ ಆರಂಭ ಮಾಡ್ತೇವೆ. 10, 11, 12ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕು, ಹೀಗಾಗಿ ಎಚ್ಚರಿಕೆ ವಹಿಸಿ ಶಾಲೆ ನಡೆಸಲಾಗುತ್ತಿದೆ. ಜನವರಿ 19 ರ ನಂತರ 1 ರಿಂದ 9ನೇ ತರಗತಿ ಮಕ್ಕಳಿಗೆ ರಜೆ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಧ್ಯಕ್ಕಂತು, ರಾಜ್ಯದಲ್ಲಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾದರೆ ಮಾತ್ರ ಶಾಲೆಗಳು ಬಂದ್ ಆಗುತ್ತವೆ. ಇಂದಿನ ಮೀಟಿಂಗ್ ನಲ್ಲಿ ಪ್ರತಿ ತಾಲೂಕಿನ, ಪಾಸಿಟಿವಿಟಿ ರೇಟ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತೆ. ಶಾಲೆಗಳ ಪರಿಸ್ಥಿತಿ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.