ಹೃದಯ ಸಂಬಂಧಿ ಸಮಸ್ಯೆಗಳು ಇರುವವರು ಕೊರೋನಾಗೆ ಬಹುಬೇಗ ತುತ್ತಾಗುತ್ತಾರೆ ಹಾಗೂ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಹಲವರ ನಿದ್ದೆಗೆಡಿಸಿವೆ. ಇದು ನಿಜವೇ?
ಇತರರಿಗೆ ಹೋಲಿಸಿದರೆ ಕೊರೋನಾ ತಗುಲುವ ಸಾಧ್ಯತೆ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಹೆಚ್ಚು ಎಂಬುದೇನೋ ನಿಜ. ಅವರಿಗೆ ಕೊರೋನಾದ ಲಕ್ಷಣಗಳು ಹೃದಯದ ಮೇಲೆ ಮತ್ತಷ್ಟು ಒತ್ತಡ ಹಾಕುವ ಸಾಧ್ಯತೆ ಇವೆ.
ಅದಕ್ಕೆ ಪರಿಹಾರ ಎಂದರೆ ಇಂಥ ರೋಗಿಗಳು ಲಸಿಕೆಗೆ ಮೊದಲ ಆದ್ಯತೆ ನೀಡಬೇಕು. ಅವಕಾಶ ಸಿಕ್ಕಾಗ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಯಿಂದ ಹೃದ್ರೋಗಿಗಳಿಗೆ ಸಮಸ್ಯೆಯಾಗುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ.
ಲಸಿಕೆ ಹಾಕಿಸಿಕೊಂಡ ಬಳಿಕ ಮೈ ಕೈ ನೋವು, ಒಂದೆರಡು ದಿನದ ಜ್ವರ ಕಾಣಿಸಿಕೊಂಡರೆ ಭಯ ಪಡಬೇಕಿಲ್ಲ. ಪ್ಯಾರಸಿಟಮಲ್ ತಿಂದರೆ ಸಾಕು. ಲಸಿಕೆಯ ಅಡ್ಡಪರಿಣಾಮಗಳು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಪ್ರತ್ಯೇಕವಾಗಿಲ್ಲ. ಆಸ್ಪಿರಿನ್ ಮಾತ್ರೆ ಸೇವಿಸುತ್ತಿರುವವರು ಇಂಜೆಕ್ಷನ್ ಕೊಟ್ಟ ಜಾಗವನ್ನು ಕೈಯಿಂದ ಉಜ್ಜದೆ ಇರುವುದು ಒಳ್ಳೆಯದು.