ಎದೆ ನೋವು ಕಾಣಿಸಿಕೊಂಡ್ರೆ ಎಂಥವರು ಕೂಡ ಭಯಪಡ್ತಾರೆ. ಏಕೆಂದರೆ ಎದೆನೋವು ಹೃದಯಾಘಾತದ ಮುಖ್ಯ ಲಕ್ಷಣ. ಹೃದಯಾಘಾತದ ಬಗ್ಗೆ ನೀವು ಅಲರ್ಟ್ ಆಗಿರೋದು ತಪ್ಪಲ್ಲ. ಆದ್ರೆ ಎದೆ ನೋವು ಬರುವುದು ಕೇವಲ ಹೃದಯದ ತೊಂದರೆಯಿಂದ ಮಾತ್ರವಲ್ಲ, ಅದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ.
ಕೊರೊನಾ ಸಾಂಕ್ರಾಮಿಕದ ನಂತರ ಹೃದಯಾಘಾತ ಸೇರಿದಂತೆ ಬೇರೆ ಬೇರೆ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಎದೆನೋವಿಗೆ ಬೇರೆ ಇನ್ಯಾವ ಕಾರಣಗಳಿರುತ್ತವೆ ಎಂಬುದನ್ನು ನೋಡೋಣ.
ಒಣ ಕೆಮ್ಮು: ಒಣ ಕೆಮ್ಮಿನಿಂದಾಗಿ ಎದೆಯ ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಾಗಿ ಸ್ನಾಯುಗಳು ದುರ್ಬಲವಾಗುತ್ತವೆ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಮ್ಮು ಬೇಗ ಗುಣವಾಗದೇ ಇದ್ದರೆ ನೋವು ಹೆಚ್ಚಾಗಲೂಬಹುದು.
ಪಲ್ಮನರಿ ಎಂಬಾಲಿಸಮ್: ಪಲ್ಮನರಿ ಎಂಬಾಲಿಸಮ್ ಎಂಬುದು ಒಂದು ವೈದ್ಯಕೀಯ ಸ್ಥಿತಿ. ಅದು ಎದೆ ನೋವನ್ನು ಉಂಟುಮಾಡಬಹುದು. ಶ್ವಾಸಕೋಶಕ್ಕೆ ರಕ್ತವನ್ನು ಸಾಗಿಸುವ ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆ ಇದ್ದರೆ ಅಂತಹ ಪರಿಸ್ಥಿತಿಯಲ್ಲಿ ರಕ್ತವು ಶ್ವಾಸಕೋಶಕ್ಕೆ ಸರಿಯಾಗಿ ತಲುಪುವುದಿಲ್ಲ ಮತ್ತು ನಿಮಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ.
ಶ್ವಾಸಕೋಶದ ಸೋಂಕು: ಕೊರೊನಾ ಸಮಯದಲ್ಲಿ ಜನರಿಗೆ ಶ್ವಾಸಕೋಶದ ಸಮಸ್ಯೆ ಹೆಚ್ಚಾಗಿತ್ತು. ಇದರಿಂದ ಅನೇಕರು ಎದೆನೋವು ಕೂಡ ಅನುಭವಿಸಿದ್ದಾರೆ. ಶ್ವಾಸಕೋಶದಲ್ಲಿ ವೈರಸ್ ದಾಳಿಯಾದರೆ ಎದೆ ನೋವು ಬರುತ್ತದೆ.
ನ್ಯುಮೋನಿಯಾ: ಕೋವಿಡ್ ಸಮಯದಲ್ಲಿ ಅನೇಕರು ನ್ಯುಮೋನಿಯಾಕ್ಕೆ ಬಲಿಯಾಗಿದ್ದಾರೆ. ಶ್ವಾಸಕೋಶದಲ್ಲಿ ಸೋಂಕು ಇದ್ದಾಗ ನ್ಯುಮೋನಿಯಾ ಅಪಾಯವಿರುತ್ತದೆ. ಇದು ಶ್ವಾಸಕೋಶದ ಏರ್ ಬ್ಯಾಗ್‌ನಲ್ಲಿ ಊತವನ್ನು ಉಂಟುಮಾಡುತ್ತದೆ. ನಂತರ ಇದು ಎದೆನೋವಿಗೆ ಕಾರಣವಾಗುತ್ತದೆ. ಹಾಗಾಗಿ ಎದೆನೋವು ಬಂದಾಕ್ಷಣ ಹೃದಯಾಘಾತವಾಗಿಬಿಡುತ್ತದೆ ಎಂದು ಗಾಬರಿಯಾಗಬೇಡಿ, ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಿರಿ.