ಹೃದಯಾಘಾತದಿಂದ ಸಾವಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳಪೆ ಆಹಾರ ಮತ್ತು ಜೀವನಶೈಲಿಯೇ ಇದಕ್ಕೆ ಕಾರಣ. ಹೃದಯಾಘಾತ ಇದ್ದಕ್ಕಿದ್ದಂತೆ ಬಂದೆರಗುವಂತಹ ಅಪಾಯ. ಆ ಸಮಯದಲ್ಲಿ ಚಿಕಿತ್ಸೆ ಸಿಗುವುದು ಕಷ್ಟ, ವೈದ್ಯರನ್ನು ಸಂಪರ್ಕಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಸಂಶೋಧನೆಯ ಪ್ರಕಾರ ಹೃದಯಾಘಾತಕ್ಕೆ ಸುಮಾರು ಒಂದು ತಿಂಗಳ ಮೊದಲು, ನಮ್ಮ ದೇಹವು ಕೆಲವು ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತದೆ. ಇವುಗಳನ್ನು ನಿರ್ಲಕ್ಷಿಸದೇ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಹೃದಯಾಘಾತದ ಅಪಾಯವನ್ನು ತಪ್ಪಿಸಬಹುದು ಮತ್ತು ಜೀವವನ್ನು ಉಳಿಸಬಹುದು.
ದೌರ್ಬಲ್ಯ ಮತ್ತು ತಲೆತಿರುಗುವಿಕೆ
ಹೃದಯಾಘಾತವಾಗುವ ಮುನ್ನ ದೇಹದಲ್ಲಿ ದೌರ್ಬಲ್ಯ ಉಂಟಾಗುತ್ತದೆ. ವಿಶ್ರಾಂತಿಯಲ್ಲಿರುವಾಗಲೂ ಬೇಗ ಸುಸ್ತಾಗಲು ಶುರುವಾಗುತ್ತದೆ. ದೇಹದಲ್ಲಿನ ದೌರ್ಬಲ್ಯದಿಂದಾಗಿ ತಲೆತಿರುಗಬಹುದು. ಈ ಚಿಹ್ನೆಗಳನ್ನು ನಿರ್ಲಕ್ಷಿಸಬೇಡಿ. ಈ ರೋಗಲಕ್ಷಣಗಳು ಯಾವುದೇ ಕಾರಣವಿಲ್ಲದೆ ಗೋಚರಿಸಿದರೆ ವೈದ್ಯರ ಬಳಿಕ ಪರೀಕ್ಷಿಸಿಕೊಳ್ಳಿ. ಯಾಕೆಂದರೆ ಇದು ಹೃದಯಾಘಾತದ ಸಂಕೇತವಾಗಿರಬಹುದು.
ಉಸಿರಾಟದ ತೊಂದರೆ
ಇದು ಕೂಡ ಹೃದಯಾಘಾತಕ್ಕೂ ಮೊದಲು ಕಾಣಿಸಿಕೊಳ್ಳುವ ಲಕ್ಷಣ. ಉತ್ತಮ ಗಾಳಿಯಿದ್ದರೂ ಉಸಿರಾಡಲು ತೊಂದರೆಯಾಗುತ್ತಿದ್ದರೆ ಹೃದಯಾಘಾತದ ಲಕ್ಷಣವಾಗಿದೆ. ಹೃದಯದ ಆಂತರಿಕ ಸಮಸ್ಯೆಗಳಿಂದ ಉಸಿರಾಟದಲ್ಲಿ ತೊಂದರೆ ಉಂಟಾಗಬಹುದು.
ನಿದ್ರೆಯ ಕೊರತೆ
ನಿದ್ರೆಯ ಕೊರತೆಯೂ ಹೃದಯಾಘಾತದ ಲಕ್ಷಣವಾಗಿದೆ. ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ಹೃದಯಾಘಾತದ ಪೂರ್ವ ಲಕ್ಷಣವಾಗಿರಬಹುದು. ಒತ್ತಡದಿಂದಲೂ ನಿದ್ರಾಹೀನತೆ ಉಂಟಾಗುತ್ತದೆ ಮತ್ತು ಒತ್ತಡ ಹೃದಯಾಘಾತಕ್ಕೂ ಕಾರಣವಾಗುತ್ತದೆ.
ಭಯ
ಹೃದಯಾಘಾತದ ಮೊದಲು ಒಂದು ರೀತಿಯ ಭಯ ಗಾಬರಿ ಆವರಿಸಿಕೊಳ್ಳಯತ್ತದೆ. ಕೆಲವರು ಬೇಗನೆ ಟೆನ್ಷನ್ ತೆಗೆದುಕೊಳ್ಳುತ್ತಾರೆ ಮತ್ತು ಬೇಗನೆ ನರ್ವಸ್ ಆಗುತ್ತಾರೆ. ನೀವು ಯಾವುದೇ ಉದ್ವೇಗವಿಲ್ಲದೆ ಈ ರೀತಿ ಭಯಪಟ್ಟುಕೊಂಡರೆ ಅದು ಹೃದಯಾಘಾತದ ಸಂಕೇತವಾಗಿರಬಹುದು. ಕೆಲವರಿಗೆ ಎದೆನೋವಿನ ಸಮಸ್ಯೆಯಿಂದಲೂ ಈ ರೀತಿ ಆಗಬಹುದು.
ವಾಕರಿಕೆ
ಪ್ರಯಾಣದ ಸಮಯದಲ್ಲಿ ವಾಹನಗಳಲ್ಲಿ ಕುಳಿತುಕೊಳ್ಳುವುದರಿಂದ ಅನೇಕರಿಗೆ ವಾಕರಿಕೆ ಸಮಸ್ಯೆ ಬರುತ್ತದೆ. ಆದರೆ ಅನಗತ್ಯ ವಾಕರಿಕೆ ಕೂಡ ಹೃದಯಾಘಾತದ ಸಂಕೇತವಾಗಿದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ವಾಕರಿಕೆ ಕಾಣಿಸಿಕೊಳ್ಳಬಹುದು. ಹೃದಯಾಘಾತದ ಮೊದಲು ವಾಂತಿಯೂ ಆಗಬಹುದು.