ಇಂದಿನಿಂದ IPO ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಪ್ರಕ್ರಿಯೆ ಪ್ರಾರಂಭವಾಗಿದೆ. ಸುಮಾರು ಎರಡೂವರೆ ತಿಂಗಳ ನಂತರ ಪ್ರಾಥಮಿಕ ಮಾರುಕಟ್ಟೆಯಲ್ಲಿ ಗಳಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಸಿಕ್ಕಿದೆ. ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿಯ ಐಪಿಓಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕಂಪನಿಯು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮಾಡುತ್ತಿದೆ.
ಮೇ 26 ರಂದು ಅಥರ್ ಇಂಡಸ್ಟ್ರೀಸ್‌ನ IPO ಹೂಡಿಕೆದಾರರಿಗೆ ಲಭ್ಯವಾಗಿತ್ತು. ಅದಾದ ನಂತರ ಯಾವುದೇ ಕಂಪನಿ ಪ್ರಾಥಮಿಕ ಮಾರುಕಟ್ಟೆಯನ್ನು ಪ್ರವೇಶಿಸಿರಲಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಐಪಿಓ ಅನ್ನು ಮಾರಾಟಕ್ಕಿಡುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಸೆಬಿ ಇದುವರೆಗೆ 28 ಕಂಪನಿಗಳಿಗೆ ಅನುಮೋದನೆ ನೀಡಿದೆ.
ಸಿರ್ಮಾ ಐಪಿಓ ಹೈಲೈಟ್ಸ್
ಸಿರ್ಮಾ ಎಸ್‌ಜಿಎಸ್ ಟೆಕ್ನಾಲಜಿ ತನ್ನ IPOಗಾಗಿ ಪ್ರತಿ ಈಕ್ವಿಟಿ ಷೇರಿನ ಬೆಲೆಯನ್ನು 209-220 ರೂಪಾಯಿಗೆ ನಿಗದಿಪಡಿಸಿದೆ. ಸಿರ್ಮಾ SGS ಟೆಕ್ನಾಲಜಿಯ ಸಾರ್ವಜನಿಕ ಸಂಚಿಕೆಯು 766 ಕೋಟಿ ರೂಪಾಯಿ ಮೌಲ್ಯದ ತಾಜಾ ಷೇರುಗಳನ್ನು ಮತ್ತು ವೀಣಾ ಕುಮಾರಿ ಟಂಡನ್ ಅವರ 33.69 ಲಕ್ಷ ಈಕ್ವಿಟಿ ಷೇರುಗಳ ಮಾರಾಟ ಕೊಡುಗೆಯನ್ನು ಒಳಗೊಂಡಿದೆ. ಹೂಡಿಕೆದಾರರು ಆಗಸ್ಟ್ 18 ರವರೆಗೆ ಬಿಡ್ ಮಾಡಬಹುದು.ಸದ್ಯ ಸಿರ್ಮಾ ಲಾಭದ ಹಾದಿಯಲ್ಲಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಮಾರುಕಟ್ಟೆಯಲ್ಲಿ ಬಹಳ ತೀಕ್ಷ್ಣವಾದ ಏರಿಳಿತಗಳಿರುವುದರಿಂದ ಕಂಪನಿಯ ಕಾರ್ಯಕ್ಷಮತೆಯನ್ನು ಅವಲೋಕಿಸಿ ಹೂಡಿಕೆ ನಿರ್ಧಾರವನ್ನು ತೆಗೆದುಕೊಳ್ಳುವುದು ಸೂಕ್ತ.
ತಜ್ಞರ ಅಭಿಪ್ರಾಯವೇನು?
ಸಿರ್ಮಾ ಐಪಿಓನಲ್ಲಿ ಹೂಡಿಕೆ ಮಾಡುವ ಬಗ್ಗೆ ತಜ್ಞರಲ್ಲಿ ಮಿಶ್ರ ಅಭಿಪ್ರಾಯಗಳಿವೆ. ಕೆಲವರು ಹೂಡಿಕೆ ಮಾಡುವಂತೆ ಸಲಹೆ ನೀಡಿದ್ರೆ, ಇನ್ನು ಕೆಲವರು ಹೂಡಿಕೆದಾರರು ಜಾಗರೂಕರಾಗಿರುವಂತೆ ಎಚ್ಚರಿಸಿದ್ದಾರೆ. ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಹೂಡಿಕೆ ಮಾಡುವಂತೆ ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ. ಅಸಿತ್ ಸಿ ಮೆಹ್ತಾ ಇನ್ವೆಸ್ಟ್‌ಮೆಂಟ್ಸ್ ಕಂಪನಿ, ಲಾಭಗಳನ್ನು ಅವಲೋಕಿಸಿದ್ರೆ ಹೂಡಿಕೆ ಮಾಡುವುದು ಸೂಕ್ತ ಎಂದಿದೆ. ಈ ಕಂಪನಿಯು ಪ್ರಸ್ತುತ 200 ಕ್ಕೂ ಹೆಚ್ಚು ಗ್ರಾಹಕರನ್ನು ಹೊಂದಿದೆ, ಅದರಲ್ಲಿ 16 ಗ್ರಾಹಕರು ಕಳೆದ 10 ವರ್ಷಗಳಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಟಿವಿಎಸ್ ಮೋಟಾರ್ಸ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಬಾಷ್ ಇಂಜಿನಿಯರಿಂಗ್ ಸಹ ಈ ಸಂಸ್ಥೆಯೊಂದಿಗೆ ನಂಟು ಹೊಂದಿವೆ.