ಹುಲಿಯ ಬಾಯಿಯಲ್ಲಿದ್ದ ಸಹೋದರನ ಜೀವವನ್ನು ಕಾಪಾಡುವ ಮೂಲಕ ವ್ಯಕ್ತಿಯೊಬ್ಬ ಸಮಯಪ್ರಜ್ಞೆ ಮೆರೆದ ಘಟನೆಯು ಲಖೀಂಪುರ ಖೇರಿ ಜಿಲ್ಲೆಯ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ಕತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದ ಬಳಿಯ ಕಬ್ಬಿನ ಗದ್ದೆಯಲ್ಲಿ ನಡೆದಿದೆ.
10 ವರ್ಷದ ಬಾಲಕ ರಾಜಕುಮಾರ್ನನ್ನು ಆತನ ಸಹೋದರ 22 ವರ್ಷದ ಸುರೇಶ್ ಎಂಬವರು ಹುಲಿಯ ಬಾಯಿಯಿಂದ ರಕ್ಷಿಸಿದ್ದಾರೆ.
ಕಬ್ಬಿನ ಗದ್ದೆಯಲ್ಲಿ ರಾಜ್ಕುಮಾರ್ ಆಟವಾಡುತ್ತಿದ್ದ ವೇಳೆಯಲ್ಲಿ ಅದೇ ಗದ್ದೆಯಲ್ಲಿ ಅಡಗಿ ಕುಳಿತಿದ್ದ ಹುಲಿಯು ಏಕಾಏಕಿ ದಾಳಿ ನಡೆಸಿದೆ. ಇದೇ ಹೊಲದಲ್ಲಿ ರಾಜ್ಕುಮಾರ್ ಸಹೋದರರು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಈ ದೃಶ್ಯವನ್ನು ನೋಡುತ್ತಿದ್ದಂತೆಯೇ ಮೊದಲು ಸುರೇಶ್ ಆಘಾತಕ್ಕೊಳಗಾಗಿದ್ದಾನೆ. ಏಕೆಂದರೆ ಸಹೋದರ ರಾಜಕುಮಾರ್ನ ತಲೆಯು ಸಂಪೂರ್ಣ ಹುಲಿಯ ಬಾಯಿಯ ಒಳಗೆ ಹೋಗಿತ್ತು. ಆದರೆ ಎದೆಗುಂದದೇ ಮುನ್ನುಗ್ಗಿದ್ದ ಸುರೇಶ್ ಸಹೋದರನ ಜೀವ ಕಾಪಾಡಿದ್ದಾನೆ. ಈ ಘಟನೆಯಿಂದ ರಾಜಕುಮಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ರಾಜಕುಮಾರನನ್ನು ಹೆಚ್ಚಿನ ಚಿಕಿತ್ಸೆಗೆಂದು ಲಕ್ನೋನ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿಗೆ ದಾಖಲು ಮಾಡಲಾಗಿದೆ. ಈತನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.