ಬಿಸಿ ಬಿಸಿ ಅನ್ನಕ್ಕೆ ರಸಂ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಅದರಲ್ಲು ಸುಲಭವಾಗಿ ಜತೆಗೆ ಆರೋಗ್ಯಕರವಾಗಿ ಮಾಡಬಹುದಾದ ಹುರುಳಿಕಾಳಿನ ರಸಂ ಇದೆ ನೋಡಿ.
ಬೇಕಾಗುವ ಸಾಮಗ್ರಿಗಳು:
3 ಟೇಬಲ್ ಸ್ಪೂನ್ ಹುರುಳಿಕಾಳು,1 ಟೀ ಸ್ಪೂನ್ – ಜೀರಿಗೆ, 1 ಟೀ ಸ್ಪೂನ್ – ಕಾಳುಮೆಣಸು, 2 – ಒಣಮೆಣಸು, ½ ಟೀ ಸ್ಪೂನ್ ಧನಿಯಾ ಕಾಳು, 1 – ಟೊಮೆಟೊ, ಬೆಳ್ಳುಳ್ಳಿ – 5ಎಸಳು, ಕರಿಬೇವು – 5 ಎಸಳು, ಕೊತ್ತಂಬರಿ ಸೊಪ್ಪು – ಸ್ವಲ್ಪ, ಅರಿಶಿನ – 1 ಟೀ ಸ್ಪೂನ್, ಇಂಗು – ಚಿಟಿಕೆ, ಸಾಸಿವೆ – ಸ್ವಲ್ಪ, ಎಣ್ಣೆ – 2 ಚಮಚ, ಹುಣಸೆಹಣ್ಣಿನ ರಸ – 1 ಟೇಬಲ್ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹುರುಳಿಕಾಳು ಹಾಕಿ ಪರಿಮಳ ಬರುವವರಗೆ ಹುರಿದುಕೊಂಡು ಒಂದು ಮಿಕ್ಸಿ ಜಾರಿಗೆ ಹಾಕಿ ಪುಡಿಮಾಡಿಕೊಳ್ಳಿ. ನಂತರ ಅದಕ್ಕೆ ಬೆಳ್ಳುಳ್ಳಿ, ಜೀರಿಗೆ, ಕೊತ್ತಂಬರಿಕಾಳು, ಕೊತ್ತಂಬರಿಸೊಪ್ಪು, ಕರಿಬೇವು, ಟೊಮೆಟೊ ಹಾಕಿ ರುಬ್ಬಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿ ರುಬ್ಬಿಕೊಳ್ಳಿ.
ನಂತರ ಒಂದು ಪಾತ್ರೆಗೆ ನೆನೆಸಿಟ್ಟ ಹುಣಸೆಹಣ್ಣಿನ ರಸ ಹಾಕಿಕೊಂಡು ಅದಕ್ಕೆ ರುಬ್ಬಿಟ್ಟುಕೊಂಡ ಈ ಮಿಶ್ರಣವನ್ನು ಹಾಕಿ ರಸಂ ಗೆ ಬೇಕಿದ್ದಷ್ಟು ನೀರು ಸೇರಿಸಿ ಅರಿಶಿನ, ಉಪ್ಪು ಹಾಕಿ ಮಿಕ್ಸ್ ಮಾಡಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಇಂಗು, ಒಣಮೆಣಸಿನಕಾಯಿ ಹಾಕಿ. ನಂತರ ರೆಡಿ ಮಾಡಿಟ್ಟುಕೊಂಡ ಹುರುಳಿಕಾಳಿನ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಕುದಿಸಿ ಗ್ಯಾಸ್ ಆಫ್ ಮಾಡಿ. ರುಚಿಕರವಾದ ಹುರುಳಿಕಾಳಿನ ರಸಂ ಸವಿಯಲು ಸಿದ್ಧ.